ಅಂಬಾನಿ ಒಡೆತನದ ಕಂಪೆನಿಗೆ ರಫೆಲ್ : 10,000 ಮಂದಿಯ ಉದ್ಯೋಗ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Rafel--01

ಬೆಂಗಳೂರು, ಆ.30- ರಫಾಯಲ್ ಯುದ್ಧ ವಿಮಾನ ಖರೀದಿ ವ್ಯವಹಾರವನ್ನು ಅನಿಲ್‍ಅಂಬಾನಿ ಅವರ ಒಡೆತನದ ಕಂಪೆನಿಗೆ ನೀಡಿರುವುದರಿಂದ ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಸುಮಾರು 10 ಸಾವಿರ ಮಂದಿಯ ಉದ್ಯೋಗ ನಷ್ಟವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಜೈಪಾಲರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರ್ಕಾರ 126 ಯುದ್ಧ ವಿಮಾನಗಳನ್ನು ಖರೀದಿಸಲು ಫ್ರೆಂಚ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಲ್ಲಿ 18 ವಿಮಾನಗಳನ್ನು ನೇರವಾಗಿ ಖರೀದಿ ಮಾಡುವುದು. ಉಳಿದ 108 ವಿಮಾನಗಳನ್ನು ಬೆಂಗಳೂರಿನ ಎಚ್‍ಎಎಲ್‍ನಲ್ಲಿ ತಯಾರು ಮಾಡುವುದು. ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಫ್ರೆಂಚ್ ಕಂಪೆನಿ ಪೂರೈಸಬೇಕೆಂಬ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದು ಯಥಾವತ್ತು ಜಾರಿಯಾಗಿದ್ದರೆ ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಇನ್ನಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿತ್ತು ಎಂದರು.

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಕಂಪೆನಿಯಿಂದ 36 ವಿಮಾನಗಳನ್ನು ನೇರವಾಗಿ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಆ ಖರೀದಿಯ ಜವಾಬ್ದಾರಿಯನ್ನು ಅನಿಲ್ ಅಂಬಾನಿ ಕಂಪೆನಿಗೆ ವಹಿಸಲಾಗಿದೆ. ಅನಿಲ್ ಅಂಬಾನಿ ಅವರು ವಿಮಾನಯಾನ ಕ್ಷೇತ್ರದಲ್ಲಿ ಯಾವುದೇ ಅನುಭವ ಹೊಂದಿಲ್ಲ. 2015ರ ಮಾರ್ಚ್ 28ರಂದು ಅನಿಲ್‍ಅಂಬಾನಿ ಕಂಪೆನಿಯನ್ನು ನೋಂದಣಿ ಮಾಡಿದ್ದಾರೆ. ಏ.10ರಂದು ಅವರ ಕಂಪೆನಿಗೆ ಮೋದಿ ಅವರು ವಿಮಾನ ಖರೀದಿಯ ಗುತ್ತಿಗೆ ನೀಡಿದ್ದಾರೆ. ಈ ವ್ಯವಹಾರದಲ್ಲಿ ಅಂಬಾನಿಯವರ ಕಂಪೆನಿ ಸುಮಾರು 30ಸಾವಿರ ಕೋಟಿವಹಿವಾಟು ಗಳಿಸಲಿದೆ. ಕೇಂದ್ರ ಸರ್ಕಾರದ ಬೊಕಸಕ್ಕೆ ಸಾವಿರಾರು ಕೋಟಿಗಳು ನಷ್ಟವಾಗುತ್ತದೆ ಎಂದು ಹೇಳಿದರು.

ಪ್ರತಿ ವಿಮಾನವನ್ನು ಎಷ್ಟು ಬೆಲೆಗೆ ಖರೀದಿ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ, ಈ ಮಾಹಿತಿಯನ್ನು ಬಹಿರಂಗ ಪಡಿಸುವುದು ಪ್ರಧಾನಿ ಅವರಿಗೆ ಬೇಕಿಲ್ಲ. ಹಾಗಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಕೆಲವೇ ದಿನಗಳಲ್ಲಿ ಯೂಟರ್ನ್ ಪಡೆದಿದ್ದಾರೆ ಎಂದು ತಿಳಿಸಿದರು.

ಕೇಂದ್ರದ ರಕ್ಷಣಾ ಇಲಾಖೆಯಂತಹ ಜವಾಬ್ದಾರಿ ನಿರ್ವಹಿಸಲು ಹಿರಿತನ ಹಾಗೂ ಅನುಭವ ಮುಖ್ಯ. ಆದರೆ ನಿರ್ಮಲಾ ಸೀತಾರಾಮನ್ ಅವರಿಗೆ ಇವರೆಡೂ ಇಲ್ಲ ಎಂದು ಜೈಪಾಲ್‍ರೆಡ್ಡಿ ಆರೋಪಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಇಂಧನ ಬೆಲೆಯನ್ನು ಮತ್ತಷ್ಟು ದುಬಾರಿಯಾಗುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin