‘ಅಮಾನವೀಯತೆ’ ರೋಗಕ್ಕೆ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಬಲಿ : ರಾಜಕಾರಣಿಗಳಿಗೂ ತಗುಲಿದ ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

Shimogga-Hospital--01

ಶಿವಮೊಗ್ಗ,ಜೂ.2- ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಕರೆದೊಯ್ಯಲು ಸಿಬ್ಬಂದಿ ಸ್ಟ್ರೆಚರ್ ಕೊಡುವುದಕ್ಕೆ ನಿರಾಕರಿಸಿದ್ದರಿಂದ ರೋಗಿಯ ಪತ್ನಿ ತನ್ನ ಪತಿಯನ್ನು ನೆಲದ ಮೇಲೆ ಎಳೆದೊಯ್ದ ದಾರುಣ ಘಟನೆ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಮಿರ್‍ಸಾಬ್ ಎಂಬುವರನ್ನು ಅವರ ಪತ್ನಿ ಆಸ್ಪತ್ರೆಗೆ ಕರೆತಂದಿದ್ದರು. ಅವರು ನಡೆಯಲು ಸಾಧ್ಯವಾಗದಷ್ಟು ನಿತ್ರಾಣರಾಗಿದ್ದರಿಂದ ಅವರನ್ನು ಎಕ್ಸ್‍ರೇ ಕೊಠಡಿಗೆ ಕರೆದೊಯ್ಯುವುದಕ್ಕಾಗಿ ಸ್ಟ್ರಿಚರ್ ಕೇಳಿದ್ದಾರೆ.ಆದರೆ ನಿರ್ದಯಿಗಳಾದ ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್ ಕೊಡಲು ನಿರಾಕರಿಸಿದ್ದಾರೆ. ಆಗ ಅನಿವಾರ್ಯವಾಗಿ ಪತ್ನಿ ಫಾಮಿದಾ ಅವರು ತಮ್ಮ ಪತಿ ಅಮಿರ್‍ಸಾಬ್‍ನನ್ನು ಕಾಲು ಹಿಡಿದು ಎಕ್ಸ್‍ರೇ ಕೊಠಡಿಗೆ ಎಳೆದುಕೊಂಡೇ ಸಾಗಿಸಿದ್ದಾರೆ. ಕಳೆದ 9 ದಿನಗಳ ಹಿಂದೆ ಅಮಿರ್‍ಸಾಬ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ನಡೆದಿರುವುದು ಮೂರು ದಿನಗಳ ಹಿಂದೆ ಆದರೆ ಆಸ್ಪತ್ರೆ ಸಿಬ್ಬಂದಿ ಈ ಅಮಾನವೀಯ ವರ್ತನೆ ತಡವಾಗಿ ಬೆಳಕಿಗೆ ಬಂದಿದೆ.   ಮಹಾನ್ ಘಟಾನುಘಟಿ ರಾಜಕಾರಣಿಗಳ ನಾಡಾಗಿರುವ ಶಿವಮೊಗ್ಗದಲ್ಲಿ ಇಂತಹ ಒಂದು ಅಮಾನುಷ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಅಮಾನತಿಗೆ ಆದೇಶ:

ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್, ರೋಗಿಗಳನ್ನು ವಿಚಾರಿಸಲು ನಿರ್ಲಕ್ಷ್ಯವಹಿಸಿರುವ ಆಸ್ಪತ್ರೆ ಸಿಬ್ಬಂದಿ ವಿರುದ್ದ ಕಾನೂನು ಕ್ರಮ ಜರುಗಿಸಲು ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತಂತೆ ಈಗಾಗಲೇ ನಾನು ಜಿಲ್ಲಾಸ್ಪತ್ರೆ ಮುಖ್ಯಸ್ಥರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಇಂಥ ಅವಿವೇಕಿ ಸಿಬ್ಬಂದಿಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಯಾರೇ ಆಗಲಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸುವುದು ಶತಸಿದ್ದ ಎಂದು ಸ್ಫಷ್ಟಪಡಿಸಿದರು.ಜಿಲ್ಲೆಯ ರಾಜಕಾರಣಿಗಳ ಉಡಾಫೆ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಲು ನಿರಾಕರಿಸಿದರೆ, ಅತ್ತ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನನಗೆ ಮೀಟಿಂಗ್ ಇದೆ. ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ನುಣುಚಿಕೊಂಡಿದ್ದಾರೆ. ಶಿವಮೊಗ್ಗ ನಗರ ಶಾಸಕ ಪ್ರಸನ್ನಕುಮಾರ್ ಅವರು ಕೂಡ ಈ ಕುರಿತ ಪ್ರಶ್ನೆಗಳಿಗೆ ಉಡಾಫೆಯಾಗಿಯೇ ಉತ್ತರಿಸಿ ಬೇಜವಾಬ್ದಾರಿ ಮರೆದಿದ್ದಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಘಟನೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೋಪಗೊಂಡು ತಮ್ಮ ಮಾಮೂಲಿ ಶೈಲಿಯಲ್ಲಿ `ಏಯ್ ಬಿಡ್ರಿ’ ಎಂದು ಹೇಳಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin