ಅಮೆರಿಕ ಕಾಂಗ್ರೆಸ್‍ನಲ್ಲಿ ಮತ್ತೆ ಪ್ರತಿಧ್ವನಿಸಿದ ಗೌರಿ ಲಂಕೇಶ್ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--02

ವಾಷಿಂಗ್ಟನ್, ಅ.16-ಹಿರಿಯ ಪತ್ರಕರ್ತೆ ಮತ್ತು ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಮತ್ತು ಆಂಧ್ರಪ್ರದೇಶದ ಬಂಡಾಯ ದಲಿತ ಸಾಹಿತಿ ಕಾಂಚ ಐಲಯ್ಯ ಅವರಿಗೆ ಕೊಲೆ ಬೆದರಿಕೆ ಪ್ರಕರಣಗಳು ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿದವು. ಇಂಥ ಘಟನೆಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಂದೊದಗಿರುವ ಆತಂಕಕಾರಿ ಸ್ಥಿತಿ ಬಗ್ಗೆ ರಿಪಬ್ಲಿಕನ್ ಪ್ರತಿನಿಧಿ (ಸಂಸದ) ಹರೋಲ್ಡ್ ಟ್ರೆಂಟ್ ಫಾಂಕ್ಸ್ ಪ್ರಮುಖವಾಗಿ ಪ್ರಸ್ತಾಪಿಸಿ ಸದನದ ಗಮನ ಸೆಳೆದರು.

ಅಮೆರಿಕ ಕಾಂಗ್ರೆಸ್ ಅಧಿವೇಶನವೊಂದರಲ್ಲಿ (ಹೌಸ್ ಆಫ್ ರೆಪ್ರೆಸೆಂಟಿಟಿವ್) ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಮತ್ತು ಕಾಂಚ ಐಲಯ್ಯ ಬೆದರಿಕೆ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಆದರೆ, ಇಂಥ ಆಘಾತಕಾರಿ ಘಟನೆಗಳನ್ನು ವಿಶ್ವದ ಅನೇಕ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಅತ್ಯಂತ ಆತಂಕಕಾರಿ ದಾಳಿ ಇದಾಗಿದೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದರು. ವಿಶ್ವದ ವಿವಿಧೆಡೆ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಇಂದು ಖ್ಯಾತ ಪತ್ರಕರ್ತರು, ವಿಚಾರವಾದಿಗಳು ಮತ್ತು ಪ್ರಗತಿಪರ ಚಿಂತಕರನ್ನು ನಿರ್ದಯವಾಗಿ ಕೊಲ್ಲುವ ಮಟ್ಟ ತಲುಪಿರುವುದು ದುರದೃಷ್ಟಕರ ಎಂದ ಅವರು, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಮತ್ತು ಎಂ.ಎಂ.ಕಲಬುರಗಿ ಅವರ ಹತ್ಯೆ ಪ್ರಕರಣಗಳನ್ನೂ ಉಲ್ಲೇಖಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin