ಇರಾನ್ ನಂತರ ಭಾರತದಲ್ಲಿ ಕಾಣಿಸಿಕೊಂಡಿದೆ ಟಿಡಿಆರ್-ಟಿಬಿ ಮಾರಣಾಂತಿಕ ಕ್ಷಯರೋಗ…!

ಈ ಸುದ್ದಿಯನ್ನು ಶೇರ್ ಮಾಡಿ

tb

ವೈದ್ಯಕೀಯ ಪರಿಭಾಷೆಯಲ್ಲಿ ಟಿಡಿಆರ್-ಟಿಬಿ ಎಂದು ಗುರುತಿಸಲ್ಪಡುವ ಸಂಪೂರ್ಣ ಲಸಿಕೆ ನಿರೋಧಿ ಕ್ಷಯರೋಗದ ಸೋಂಕು ದೇಶದ ಕೆಲವೆಡೆ ವ್ಯಾಪಿಸಿದೆ ಎನ್ನುವ ಸಂಗತಿ ವೈದ್ಯಲೋಕವನ್ನೇ ಬೆಚ್ಚಿಬೀಳಿಸಿದೆ. ಇದನ್ನು ಪತ್ತೆ ಹಚ್ಚುವ ಪ್ರಯೋಗಾಲಯ ಹೈಟೆಕ್ ಸಿಟಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಇಲ್ಲ ಎಂಬುದು ಮತ್ತೊಂದು ಆತಂಕದ ವಿಷಯವಾಗಿದೆ.

ಎಕ್ಸ್‍ಡಿಆರ್ ಎಂದೂ ಗುರುತಿಸಲಾದ ಟಿಡಿಆರ್-ಟಿಬಿ ಎಂಬ ಮಾರಣಾಂತಿಕ ಕ್ಷಯರೋಗದ ಕಬಂಧಬಾಹು ಕೆಲವೆಡೆ ವ್ಯಾಪಿಸಿದ್ದು, ಕೆಲವರಲ್ಲಿ ಕಾಣಿಸಿಕೊಂಡಿದೆ. ಕೆಲ ವರ್ಷಗಳ ಹಿಂದೆ ಇರಾನ್‍ನಲ್ಲಿ ಮೊಟ್ಟಮೊದಲ ಬಾರಿಗೆ ಗೋಚರಿಸಿದ್ದ, ಯಾವುದೇ ಔಷಧಗಳಿಂದಲೂ ಗುಣಮುಖವಾಗದ ಅಪಾಯಕಾರಿ ಕ್ಷಯರೋಗ ಇದೀಗ ನಮ್ಮ ದೇಶದಲ್ಲೂ ಪತ್ತೆಯಾಗಿದೆ. ಇರಾನ್ ನಂತರ ಭಾರತದಲ್ಲಿ ಮಾತ್ರ ಕಾಣಿಸಿಕೊಂಡಿರುವ ಈ ರೋಗದ ಸೋಂಕು ಈಗಾಗಲೇ ಮುಂಬೈನಲ್ಲಿ ಹಲವರಿಗೆ ತಗುಲಿದೆ. ಇದು ಕ್ಷಯರೋಗದ ಒಂದು ಹಂತ. ಇದು ಅಂದಾಜು ಒಂದು ಲಕ್ಷ ಕ್ಷಯರೋಗಿಗಳಲ್ಲಿ ಒಬ್ಬರಿಗೆ ಬರುವ ಸಾಧ್ಯತೆ ಇದೆ. ಇದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸುಸಜ್ಜಿತ ಪ್ರಯೋಗಾಲಯದ ಅಗತ್ಯವಿದೆ. ಪ್ರಸ್ತುತ ಇದರ ಪರಿಶೀಲನೆಗೆ ಚೆನ್ನೈನ ಕ್ಷಯ ರೋಗ ಸಂಶೋಧನಾ ಕೇಂದ್ರದಲ್ಲಿ ಮಾತ್ರ ಸಾಧ್ಯ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.

tb-3

ಯಾವುದೇ ಔಷಧಿಗಳಿಗೂ ಬಗ್ಗದ, ಲಸಿಕೆಗಳಿಗೆ ಜಗ್ಗದ ಈ ಸೋಂಕು ಕ್ಷಯರೋಗ ಅಮರಿಕೊಂಡರೆ ಸಾವೇ ಗತಿ ಎಂಬ ಅತಂಕವೂ ಎದುರಾಗಿದೆ. ಔಷಧ-ಮಾತ್ರೆ- ಲಸಿಕೆಗಳಿದ್ದರೂ ಭಾರತದಲ್ಲಿ ಸಾವಿ ರಾರು ಮಂದಿ ಕ್ಷಯರೋಗಕ್ಕೆ ಬಲಿಯಾಗುತ್ತಿದ್ದಾರೆ. ಈಗ ಲಸಿಕೆಯಿಲ್ಲದ ಮತ್ತು ಗುಣಪಡಿಸಲಾಗದ ಈ ಗಂಡಂತರಕಾರಿ ಕಾಯಿಲೆಯಿಂದ ಜನರು ಭಯಭೀತರಾಗಿದ್ದಾರೆ.

tb-2

ಟಿಡಿಆರ್-ಟಿಬಿ ಎಂದರೇನು..?
ಟಿಡಿಆರ್- ಟಿಬಿ ಅಂದರೆ ಟೋಟಲ್ ಡ್ರಗ್ ರೆಸಿಸ್ಟೆನ್ಸ್ – ಟ್ಯೂಬರ್‍ಕ್ಯೂಲೋಸಿಸ್. ಇದನ್ನು ಕನ್ನಡದಲ್ಲಿ ಸಂಪೂರ್ಣ ರೋಗ ವಿರೋಧಿ ಕ್ಷಯರೋಗ ಎಂದು ಹೇಳಬಹುದು. ಸರಳವಾಗಿ ತಿಳಿಸುವುದಾದರೆ ಇದು ಯಾವುದೇ ಔಷಧಕ್ಕೂ ಬಗ್ಗದ ಹಠಮಾರಿ ಸೂಕ್ಷ್ಮಾಣುವಿನಿಂದ ಹರಡುವ ಸೋಂಕು ಕಾಯಿಲೆ. ಕ್ಷಯ ರೋಗಿಗಳಲ್ಲಿ ಟಿಡಿಆರ್‍ನಂತೆ ಎಂಡಿಆರ್ (ಮಲ್ಟಿ ಡ್ರಗ್ ರೆಸಿಸ್ಟೆನ್ಸ್ – ಬಹು ಔಷಧಿ ವಿರೋಧಕ) ಎಂಬ ಅಪಾಯಕಾರಿ ಹಂತವೂ ಕಾಣಿಸಿಕೊಳ್ಳುತ್ತದೆ.

ಟಿಡಿಆರ್-ಟಿಬಿಗೆ ಕಾರಣಗಳೇನು..?
ಸಾಮಾನ್ಯವಾಗಿ ಕ್ಷಯರೋಗಿಗಳಲ್ಲಿ ಲಕ್ಷಾಂತರ ಸೂಕ್ಷ್ಮ ರೋಗಾಣು ಅಥವಾ ಬ್ಯಾಕ್ಟೀರಿಯಾಗಳು ಇರುತ್ತವೆ. ಇಂತಹ ರೋಗಾಣುಗಳನ್ನು ಔಷಧಿಗಳ ಮೂಲಕ ನಾಶಪಡಿಸಲಾಗುತ್ತದೆ. ಟಿಬಿ ಇರುವವರಿಗೆ ನಾಲ್ಕೈದು ವಿಧಾನ ಅಥವಾ ಕ್ರಮದಲ್ಲಿ ಔಷಧ ನೀಡಲಾಗುತ್ತದೆ. ಶರೀರದೊಳಗಿನ ಎಲ್ಲ ಕ್ಷಯ ರೋಗಾಣುಗಳನ್ನು ನಾಶಪಡಿಸುವ ಮೂಲಕ ಕಾಯಿಲೆ ಗುಣಪಡಿಸಲಾಗುತ್ತದೆ. ಸಾಧಾರಣ ಕ್ಷಯರೋಗವಿರುವ ವ್ಯಕ್ತಿ ಆರರಿಂದ ಒಂಬತ್ತು ತಿಂಗಳ ಅವಧಿಯಲ್ಲಿ ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಲು ವಿಫಲವಾದರೆ ಯಾವ ಲಸಿಕೆಗೂ ಬಗ್ಗದ ಟಿಡಿಆರ್-ಟಿಬಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸಂಬಂಧಪಟ್ಟ ಔಷಧ ತೆಗೆದುಕೊಂಡ ನಂತರ ರೋಗಿಗೆ ತಾನು ಗುಣಮುಖವಾಗಿರುವ ಅನುಭವವಾದರೆ ಔಷಧ ಪಡೆಯುವುದನ್ನೇ ನಿಲ್ಲಿಸುತ್ತಾರೆ. ಆದರೆ ಆಗ ರೋಗಿಯ ದೇಹದಲ್ಲಿರುವ ಟಿಬಿಕಾರಕ ಕ್ರಿಮಿಗಳು ನಾಶವಾಗಿರುವುದಿಲ್ಲ. ರೋಗಿಯ ನಿರ್ಲಕ್ಷ್ಯದಿಂದ ರೋಗ ಮತ್ತೆ ಉಲ್ಬಣಗೊಂಡು ಅಂತಿಮ ಹಂತ ತಲುಪಿ ಪ್ರಾಣಕ್ಕೆ ಸಂಚಕಾರ ಬರುತ್ತದೆ.

ಗಂಡಾಂತರಗಳೇನು..?
ವೈದ್ಯರ ಪ್ರಕಾರ ಟಿಡಿಆರ್-ಟಿಬಿ ಬಗ್ಗೆ ಜನರು ಅಷ್ಟೊಂದು ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ, ಕ್ಷಯರೋಗ ಇದ್ದರೂ ಸರಿಯಾಗಿ ಔಷಧ ಸೇವಿಸದೇ ತಾತ್ಸಾರ ಮಾಡುವ ರೋಗಿಗಳಲ್ಲಿ ಮಾತ್ರ ಈ ಕ್ಷಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಒಮ್ಮೆ ಟಿಡಿಆರ್ ಕ್ಷಯರೋಗ ಪತ್ತೆಯಾದರೆ ಸಾವೇ ಗತಿ. ಏಕೆಂದರೆ, ಇಂಥ ಕ್ಷಯ ರೋಗಿಗಳು ವೈದ್ಯರ ಸೂಚನೆಯನ್ನು ನಿರ್ಲಕ್ಷಿಸಿ ಕೆಲವು ತಿಂಗಳು ಮಾತ್ರ ಔಷಧ ಸೇವಿಸಿ ಸುಮ್ಮನಾಗುತ್ತಾರೆ. ಕೆಲ ವರ್ಷಗಳ ನಂತರ ರೋಗಿಗಳಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಆಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಪ್ರತಿರೋಧಕ ಔಷಧ ಲಸಿಕೆಗಳು ಕೆಲಸ ಮಾಡುವುದಿಲ್ಲ.
ಹೀಗಾಗಿ ಕ್ಷಯರೋಗದ ಮೃತ್ಯುಪಾಶ ದಿಂದ ಪಾರಾಗಲು ಕ್ಷಯ ರೋಗ ಲಕ್ಷಣಗಳು ಕಾಣಿಸಿಕೊಂಡಾಗಲೇ ಎಚ್ಚರ ವಹಿಸಬೇಕು ಮತ್ತು ಟಿಬಿ ಸಂಪೂರ್ಣ ಗುಣಮುಖವಾಗುವ ತನಕ ಕ್ರಮಬದ್ದವಾಗಿ ತಪ್ಪದೇ ಔಷಧ ತೆಗೆದುಕೊಳ್ಳಬೇಕು.

ಮುನ್ನೆಚ್ಚರಿಕೆ ಕ್ರಮಗಳೇನು..?
ಕ್ಷಯ ರೋಗದ ಲಕ್ಷಣ ಗೋಚರಿಸಿದ ತಕ್ಷಣ ರೋಗಿ ವೈದ್ಯರನ್ನು ಭೇಟಿ ಮಾಡಬೇಕು. ವೈದ್ಯರು ನೀಡುವ ಔಷಧಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. ವೈದ್ಯರು ಸೂಚಿಸಿದಷ್ಟು ವರ್ಷಗಳ ಕಾಲ ನಿರಂತರವಾಗಿ ಕ್ರಮಬದ್ಧವಾಗಿ ಔಷಧಗಳನ್ನು ಪಡೆಯಬೇಕು.

ಯಾವ ರೋಗಿ ವೈದ್ಯರ ಸಲಹೆ ಸೂಚನೆಯಂತೆ ಔಷಧಗಳನ್ನು ಚಾಚೂತಪ್ಪದೆ ತೆಗೆದುಕೊಳ್ಳುವುದಿಲ್ಲವೋ ಅಂತಹವರಲ್ಲಿ ಟಿಡಿಆರ್-ಟಿಬಿ ಅವರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವು ಕ್ಷಯರೋಗಿಗಳಲ್ಲಿ ಔಷಧ ಸೇವನೆಯಿಂದ ಮೂತ್ರಪಿಂಡ, ಹೃದಯ ಮೊದಲಾದ ಅಂಗಾಂಗಗಳ ಮೇಲೆ ದುಷ್ಟರಿಣಾಮ ಉಂಟಾಗಬಹುದು. ಈ ಕಾರಣದಿಂದ ರೋಗಿಗಳು ಔಷಧಗಳನ್ನು ನಿಲ್ಲಿಸುವುದರಿಂದ ಟಿಡಿಆರ್ ಕ್ಷಯದ ಅಪಾಯ ಅಧಿಕ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin