ಈ ಗ್ರಾಮದಲ್ಲಿ ಜನ-ಜಾನುವಾರಿಗೆ ಕಲುಷಿತ ಕೆರೆ ನೀರೇ ಗತಿ..!

ಈ ಸುದ್ದಿಯನ್ನು ಶೇರ್ ಮಾಡಿ

Water-01
ಹನೂರು, ಆ.8- ವಿದ್ಯುತ್ ಸರಬರಾಜಿ ನಲ್ಲಿ ವ್ಯತ್ಯಾಸಗೊಂಡು ಟ್ರಾನ್ಸ್ ಫಾರಂ ಸುಟ್ಟು ಹೋಗಿದ್ದು , ದುರಸ್ತಿಗೊಳಿಸಲು ವಿಫಲರಾಗಿರುವ ಶೆಟ್ಟಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯಿಂದ ಕಳೆದ 8 ದಿನಗಳಿಂದ ಇಡೀ ಗ್ರಾಮವೇ ಕಲುಷಿತ ಕೆರೆ ನೀರನ್ನು ಉಪಯೋಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮವು ಗ್ರಾಪಂ ಕೇಂದ್ರ ಬಿಂದುವಾಗಿದ್ದು, 1000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುತ್ತದೆ. ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಪಂಪ್‍ಸೆಟ್ ಬಾವಿ, ಬೀದಿ ದೀಪ, ಫ್ಲೋರ್‍ಮಿಲ್‍ಗಾಗಿ ಎರಡು ಟ್ರಾನ್ಸ್‍ಫಾರಂ ಗಳನ್ನು ಅಳವಡಿಸಲಾಗಿದೆ.

ಅದರಲ್ಲೊಂದು ಕಳೆದೊಂದು ವಾರದಿಂದ ವಿದ್ಯುತ್ ವ್ಯತ್ಯಾಸದಿಂದ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿರುತ್ತದೆ. ವಾರದಿಂದಲೂ ಜನ- ಜಾನುವಾರುಗಳು ಸಹ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದ್ದು, ಸಂಬಂಧಿಸಿದ ಗ್ರಾಪಂ ಆಡಳಿತ ಮಂಡಳಿ ಮತ್ತು ಚುನಾಯಿತ ಪ್ರತಿನಿಧಿಗಳು ಸಂಬಂಧವೇ ಇಲ್ಲದಂತೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿರುತ್ತದೆ.

ದಿನ ಬಳಕೆ ಉಪಯೋಗಕ್ಕೆ ಕೆರೆ ನೀರು ಆಶ್ರಯ: ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿರುವ ಕಾರಣ ಗ್ರಾಮಸ್ಥರು ದಿನನಿತ್ಯ ಕುಡಿಯುವ ನೀರಿಗಾಗಿ ಅಕ್ಕ ಪಕ್ಕದ ಜಮೀನುಗಳಿಗೆ ತೆರಳಿ ನೀರು ತರುವಂತ ಪರಿಸ್ಥಿತಿ ನಿರ್ಮಾಣವಾದರೆ ಇನ್ನೂ ಕೆಲವರು ಬೈಕ್‍ನಲ್ಲಿ ಪಕ್ಕದ ಗ್ರಾಮ ಕುರಟ್ಟಿ ಹೊಸೂರಿಗೆ ಹೋಗಿ ಕುಡಿಯುವ ನೀರು ತರುವಂತಹ ಸಂದರ್ಭ ಒದಗಿ ಬಂದಿರುತ್ತದೆ.

ಗ್ರಾಮದ ಹೊರ ವಲಯದ ಕರೆ ನೀರನ್ನು ಜಾನುವಾರು ತೊಳೆಯಲು, ಕುಡಿಯಲು ಮತ್ತು ಬಟ್ಟೆ ಒಗೆಯುವುದು ದಿನ ಬಳಕೆ ವಸ್ತುಗಳ ಸ್ವಚ್ಚತೆಗೆ ಉಪಯೋಗಿಸುತ್ತಿದ್ದ ಕಲ್ಮಶಗೊಂಡಿರುವ ನೀರೇ ಕುಡಿಯಲು ಆಶ್ರಯವಾಗಿರುತ್ತದೆ. ಹಾಗೂ ನಿತ್ಯ ಬಳಕೆಗೆ ಬಳಸುವಂತಹ ಪರಿಸ್ಥಿತಿ ಜಗಜ್ಜಾಹೀರ ವಾಗಿದ್ದು , ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಯನ್ನು ಅರಿತು ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin