ಉಡುಪಿ ಕೃಷ್ಣಮಠದಲ್ಲಿ ಇಫ್ತಿಯಾರ್ ಕೂಟ : ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Udupi

ಬೆಂಗಳೂರು, ಜೂ.27- ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಇಫ್ತಿಯಾರ್ ಕೂಟ ಆಯೋಜನೆ ಮಾಡಿರುವುದು ಸರ್ವಧರ್ಮ ಸಮನ್ವಯ ಭಾವದಿಂದ ಕೂಡಿದೆ. ಆದರೆ, ನಮಾಜ್‍ಗೆ ಅವಕಾಶ ನೀಡಿದರೆ ಅದು ತಪ್ಪು ಎಂದು ಕೇಂದ್ರ ಸಚಿವ ಸದಾನಂದಗೌಡ ಅಭಿಪ್ರಾಯಪಟ್ಟರು. ಮೇಕ್ರಿವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಅನಾವರಣಗೊಳಿಸಿ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಫ್ತಿಯಾರ್ ಕೂಟ ಆಯೋಜಿಸಿರುವುದರಿಂದ ಹಿಂದೆ ಭಾವನಾತ್ಮಕ ವಿಚಾರಗಳಿವೆ.

ರಂಜಾನ್ ಆಚರಣೆ ಮಾಡುವುದು ತಪ್ಪಲ್ಲ. ರಾಜಕಾರಣಿಗಳು ರಂಜಾನ್ ಸಂದರ್ಭದಲ್ಲಿ ಟೋಪಿ ಹಾಕಿ ಪೋಸ್ ಕೊಡ್ತೀವಿ. ಆದರೆ, ಪೇಜಾವರ ಶ್ರೀಗಳು ಮಾಡಿದ್ದು ಶೋ ಅಲ್ಲ. ಅವರು ಯಾವುದೇ ಲಾಭಗಳ ಉದ್ದೇಶದಿಂದ ಇಫ್ತಿಯಾರ್ ಕೂಟ ಆಯೋಜನೆ ಮಾಡಿಲ್ಲ. ಸರ್ವಧರ್ಮ ಸಮನ್ವಯತೆ ದೃಷ್ಟಿಯಿಂದ ಅವರ ಕೆಲಸ ಸಮರ್ಥನೀಯ. ಆದರೆ, ನಮಾಜ್ ಇನ್ನಿತರೆ ವಿಚಾರಗಳಿಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಹೇಳಿದರು.

ಬುದ್ದಿ ಜೀವಿಗಳಿಗೆ ಬುದ್ದಿ ತಲೆಯಲ್ಲಿ ಇರುವುದಿಲ್ಲ. ಅವರ ಚೀಲದಲ್ಲಿರುತ್ತದೆ. ಅದನ್ನು ಅವರ ಅನವಶ್ಯಕ ಕೆಲಸಗಳಿಗೆ ಖರ್ಚು ಮಾಡುತ್ತಾರೆ ಎಂದು ಸದಾನಂದಗೌಡರು ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ವಿವಿಯಲ್ಲಿ ಗೋಮಾಂಸ ಭಕ್ಷಣೆ ಆಗಿರುವುದರ ಹಿಂದೆ ಸರ್ಕಾರದ ಕೈವಾಡ ಇದ್ದಂತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಗಮನಾರ್ಹ. ಸಿದ್ದರಾಮಯ್ಯನವರೇ ಇದಕ್ಕೆ ಕುಮ್ಮಕ್ಕು ನೀಡುವ ಗುಮಾನಿ ಇದೆ ಎಂದರು.

ಸರ್ಕಾರ ಗೋಮಾಂಸ ಭಕ್ಷಣೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಯಾರ ಆಹಾರ ಪದ್ಧತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ದೇಶದ ಸಂಸ್ಕøತಿ, ಸಂಸ್ಕಾರದ ಹಿನ್ನೆಲೆಯಲ್ಲಿ ಗೋಹತ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಅದನ್ನು ವಿರೋಧಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಭಕ್ಷಣೆ ಮಾಡಿರುವುದು ಒಳ್ಳೆಯ ಸಂಪ್ರದಾಯ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin