ಕುಣಿಯುತಿದೆ ಕಾಂಚಾಣ : ಮತ್ತೊಂದು ಖಾಸಗಿ ಬಸ್‍ನಲ್ಲಿ 52 ಲಕ್ಷ ವಶ

ಈ ಸುದ್ದಿಯನ್ನು ಶೇರ್ ಮಾಡಿ

Black-Money--01

ಬೆಂಗಳೂರು, ಏ.20- ದೇವನಹಳ್ಳಿ ಚೆಕ್‍ ಪೋಸ್ಟ್ ಬಳಿ ಮೊನ್ನೆ ರಾತ್ರಿ ಖಾಸಗಿ ಬಸ್ಸೊಂದರಲ್ಲಿ ಹಣ ಪತ್ತೆಯಾದ ಬೆನ್ನಲ್ಲೇ ನಿನ್ನೆ ರಾತ್ರಿ ಮತ್ತೆ ಅದೇ ಸಂಸ್ಥೆಗೆ ಸೇರಿದ ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 52.91 ಲಕ್ಷ ಹಣ ಸಿಕ್ಕಿದೆ. ಈ ಸಂಬಂಧ ಹಣ ಸಾಗಿಸುತ್ತಿದ್ದ ಇಬ್ಬರನ್ನು ದೇವನಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ರಾತ್ರಿ ಹೈದರಾಬಾದ್‍ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬಸ್ಸನ್ನು ದೇವನಹಳ್ಳಿ ಬಳಿಯ ರಾಣಿ ಸರ್ಕಲ್ ಬಳಿ ನಿರ್ಮಿಸಲಾಗಿರುವ ಚುನಾವಣಾ ಚೆಕ್‍ ಪೋಸ್ಟ್ ಬಳಿ ತಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಎರಡು ಬ್ಯಾಗ್‍ಗಳಲ್ಲಿ ಒಟ್ಟು 52.91 ಲಕ್ಷ ರೂ. ಪತ್ತೆಯಾಗಿದೆ. ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಹಣವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊನ್ನೆ ರಾತ್ರಿ ಇದೇ ಮಾರ್ಗವಾಗಿ ಬಂದ ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 52.53 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು. ರಾತ್ರಿ 52.91 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಒಟ್ಟಾರೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.  ಇದೇ ಚೆಕ್‍ ಪೋಸ್ಟ್‍ನಲ್ಲಿ ಮೊನ್ನೆ ರಾತ್ರಿ ಮತ್ತೊಂದು ಪ್ರಕರಣದಲ್ಲಿ 10 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಣಕ್ಕೆ ದಾಖಲೆಗಳನ್ನು ನೀಡುವುದಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿಗಳು ಹೇಳಿದ್ದು, ತನಿಖೆ ಪ್ರಗತಿಯಲ್ಲಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin