ಕುತೂಹಲ ಕೆರಳಿಸಿದ ಅಶೋಕ್ ಮನೆಗೆ ಮೇಯರ್ ಸಂಪತ್ ರಾಜ್-ಮುನಿರತ್ನ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Muniratna--01

ಬೆಂಗಳೂರು,ಆ.25- ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಾಲಿ ಮೇಯರ್ ಸಂಪತ್ ರಾಜ್ ಆರ್.ಆರ್.ನಗರ ಶಾಸಕ ಮುನಿರತ್ನ ಅವರು ಬಿಜೆಪಿ ಮುಖಂಡ ಆರ್.ಅಶೋಕ್ ಮನೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬಿಬಿಎಂಪಿ ಮೇಯರ್ ಸಂಪತ್‍ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಅಧಿಕಾರಿಗಳೊಂದಿಗೆ ಯಶವಂತಪುರ ವ್ಯಾಪ್ತಿಯ ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಯನ್ನು ಇಂದು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಮುನಿರತ್ನ ಕೂಡ ಬಂದಿದ್ದರು. ಮುತ್ಯಾಲನಗರದಿಂದ ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಕೆಳಸೇತುವೆ ಕಾಮಗಾರಿಯನ್ನು ಇವರೆಲ್ಲ ಪರಿಶೀಲಿಸಿದರು. ಆದರೆ ಇದು ಮೇಲ್ನೋಟಕ್ಕೆ ಪರಿಶೀಲನಾ ಕಾರ್ಯ ಅಷ್ಟೆ. ಕೆಲವೇ ನಿಮಿಷದಲ್ಲಿ ಈ ಕಾರ್ಯ ಮುಗಿಸಿ ಅಲ್ಲೇ ಸಮೀಪದ ಜಾಲಹಳ್ಳಿಯಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಆರ್.ಅಶೋಕ್ ಮನೆಗೆ ಮುನಿರತ್ನ, ಸಂಪತ್‍ರಾಜ್ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿದರು.

ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬೆಂಗಳೂರಿನ ಅಭಿವೃದ್ದಿ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ಮುನಿರತ್ನ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಅಶೋಕ್ ಮನೆಗೆ ಇವರುಗಳ ಈ ಭೇಟಿ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.  ಸೆಪ್ಟೆಂಬರ್‍ನಲ್ಲಿ ನಡೆಯುವ ಮೇಯರ್ ಚುನಾವಣೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳುವ ವ್ಯಕ್ತಿಗೆ ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜು ಪಟ್ಟು ಹಿಡಿದಿದ್ದಾರೆ.

ಒಂದು ವೇಳೆ ತಮ್ಮ ಬೇಡಿಕೆಗೆ ಆದ್ಯತೆ ಕೊಡದೆ ಹೋದರೆ ಚುನಾವಣೆ ತಪ್ಪಿಸಿಕೊಂಡು ವಿದೇಶ ಪ್ರವಾಸಕ್ಕೆ ತೆರಳುವ ಪ್ಲಾನ್ ಮಾಡಿದ್ದಾರೆಂದು ನಿನ್ನೆಯಷ್ಟೆ ಈ ಸಂಜೆಯಲ್ಲಿ ವರದಿ ಪ್ರಕಟವಾಗಿತ್ತು. ಇಂದು ಯಶವಂತಪುರ ರೈಲ್ವೆ ಸೇತುವೆ ಕಾಮಗಾರಿ ಪರಿಶೀಲನೆ ನೆಪಕ್ಕಷ್ಟೇ ಮಾಡಿ ಆರ್.ಅಶೋಕ್ ಮನೆಗೆ ತೆರಳಿ ಮುನಿರತ್ನ, ಸಂಪತ್‍ರಾಜ್ ಮತ್ತಿತರರು ಬಹಳ ಹೊತ್ತು ಮಾತುಕತೆ ನಡೆಸಿದುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin