ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಪೈರು ನಾಟಿ ಮಾಡಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Road

ಗುಬ್ಬಿ, ಆ.15-ಪಟ್ಟಣದ 17 ನೇ ವಾರ್ಡ್ ಹನುಮಂತನಗರ ನಿವಾಸಿಗಳು ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಕೆಸರು ಗದ್ದೆಯಂತಾಗಿರುವ ರಸ್ತೆಗೆ ಪೈರು ನಾಟಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.  ಪಟ್ಟಣದ ಶ್ರೀಚನ್ನಬಸವೇಶ್ವರ ದೇವಾಲಯದ ಮೂಲಕ ಹನುಮಂತ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆ ಬಿದ್ದ ಪರಿಣಾಮ ಕೆಸರು ಗದ್ದೆಯಂತಾಗಿದ್ದು ಜನಸಾಮಾನ್ಯರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಇದೇ ರಸ್ತೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರವಿದ್ದು ಇಲ್ಲಿಗೆ ಪ್ರತಿ ನಿತ್ಯ ಬರುವ ವಿದ್ಯಾರ್ಥಿಗಳು ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳನ್ನು ಕೇಳಿದರೆ ನೀವು ನಮಗೆ ಪುಕ್ಕಟ್ಟೆ ಮತಹಾಕಿಲ್ಲ ಎನ್ನುತ್ತಾರೆ ಆದ್ದರಿಂದ ನಮ್ಮ ಸಮಸ್ಯೆಯನ್ನು ಕೇಳುವವರೆ ಇಲ್ಲದಂತಾಗಿದೆ. ಕೆಸರು ಗದ್ದೆಯಂತಾಗಿರುವ ರಸ್ತೆಯನ್ನು ತ್ವರಿತವಾಗಿ ದುರಸ್ತಿಗೊಳಿಸದಿದ್ದರೆ ಮುಂಬರುವ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಸ್ಥಳೀಯ ಮುಖಂಡ ಶಿವಕುಮಾರ್ ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ರಾಮಯ್ಯ ಮಾತನಾಡಿ, ಕಳೆದ ಹಲವು ಬಾರಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಪಟ್ಟಣ ಪಂಚಾಯ್ತಿಗೆ ಮನವಿ ಮಾಡಿಕೊಂಡರೂ ಯಾವುದೆ ಪ್ರಯೋಜನವಾಗಿಲ್ಲ ಚುನಾವಣೆಯೊಳಗೆ ರಸ್ತೆಯನ್ನು ದುರಸ್ತಿಗೊಳಿಸದಿದ್ದರೆ ಮತ್ತಷ್ಟು ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಸ್ಥಳೀಯ ನಿವಾಸಿ ಪ್ರಭಾವತಿ ಮಾತನಾಡಿ, ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತೀವ್ರತರ ಸಮಸ್ಯೆಯಾಗಿದೆ ಪ್ರತಿ ನಿತ್ಯ ಶಾಲೆಗ ಹೋಗುವ ಮಕ್ಕಳು ಕೆಸರಿನಲ್ಲಿ ಎದ್ದು ಬಿದ್ದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಬೀದಿದೀಪಗಳಿರುವುದಿಲ್ಲ. ಹಾಗಾಗಿ ಸಂಚರಿಸಲು ತೀವ್ರ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ನಮ್ಮ ರಸ್ತೆ ಮತ್ತು ಬೀದಿದೀಪಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.  ಪ್ರತಿಭಟನೆಯಲ್ಲಿ ಕುಮಾರ್, ಮಾರುತಿ, ನಾಗರಾಜು, ಗಿರೀಶ್, ಹರೀಶ್, ಕಿಟ್ಟಿ, ಭೀಮಣ್ಣ ಮುಂತಾದವರು ಭಾಗವಹಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin