ಕೊನೆಗೂ ಸಿಕ್ಕಿಬಿದ್ದ ಗೌರಿ ಹಂತಕರು..? ಇನ್ನೊಂದು ವಾರದಲ್ಲಿ ಬಹಿರಂಗ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು, ಫೆ.22- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿದ್ದು, ಒಂದು ವಾರದೊಳಗೆ ಹಿರಂಗಪಡಿಸುವುದಾಗಿ ವಿಧಾನಪರಿಷತ್‍ನಲ್ಲಿ ಹೇಳಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಹಿರಿಯ ಸಾಹಿತಿ ಕಲ್ಬುರ್ಗಿ ಹತ್ಯೆ ಪ್ರಕರಣ ಬಗ್ಗೆ ನಿಖರ ಮಾಹಿತಿ ಇನ್ನೂ ದೊರೆತಿಲ್ಲ ಎಂದು ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಎಸ್.ಪಿ.ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಂತಕರ ಸುಳಿವು ಪತ್ತೆಯಾಗಿದ್ದು, ಮುಂದಿನ ಒಂದು ವಾರದಲ್ಲಿ ಬಹಿರಂಗ ಪಡಿಸುತ್ತೇವೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಂತಕರ ಸುಳಿವು ಸಿಕ್ಕಿದೆ ಆದಷ್ಟು ಬೇಗ ಬಹಿರಂಗಪಡಿಸುತ್ತೇವೆ. ಹೀಗೆ ಮಾಡುತ್ತೇವೆ, ಹಾಗೆ ಮಾಡುತ್ತೇವೆ ಎಂದು ಹೇಳುತ್ತಲೇ ಬಂದಿದ್ದೀರಿ. ಯಾವಾಗ ಬಹಿರಂಗಪಡಿಸುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಹೇಳಿ ಎಂದು ಆಗ್ರಹಿಸಿದರು. ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಇನ್ನೊಂದು ವಾರದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಸಚಿವರು ಉತ್ತರಿಸಿದರು. ಆದರೆ ಕಲ್ಬುರ್ಗಿ ಹತ್ಯೆ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು.

ಬಿಜೆಪಿ ಸದಸ್ಯ ಪ್ರದೀಪ್‍ಶೆಟ್ಟರ್ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಗಳ ಹಾವಳಿ ತೀವ್ರವಾಗಿದೆ. ರಾಜಧಾನಿ ಬೆಂಗಳೂರಿಗಿಂತ ಹೆಚ್ಚಾಗಿ ರೌಡಿಗಳ ಉಪಟಳ ನಡೆಯುತ್ತಿದೆ. ಜನಸಾಮಾನ್ಯರು ಆತಂಕದಿಂದ ಜೀವನ ನಡೆಸಬೇಕಾಗಿದೆ. ಕಂಡಲ್ಲಿ ಗುಂಡಿಕ್ಕುವಂತೆ ಗೃಹ ಸಚಿವರು ಆದೇಶ ನೀಡಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಸಬ್‍ಇನ್ಸ್‍ಪೆಕ್ಟರ್ ಹಾಗೂ ಅದಕ್ಕಿಂತ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಪಿಸ್ತೂಲ್ ನೀಡಿದ್ದೇವೆ. ಅದನ್ನು ಬಳಸಲು ಅವರಿಗೆ ಅನುಮತಿ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಗುಂಡು ಹಾರಿಸಲು ಆದೇಶ ನೀಡಿ ಎಂದು ಪ್ರದೀಪ್‍ಶೆಟ್ಟರ್ ಹೇಳಿದರು.  ಮನಸ್ಸಿಗೆ ಬಂದಂತೆ ಆದೇಶ ನೀಡಲು ಸಾಧ್ಯವಿಲ್ಲ.ಪೊಲೀಸ್ ಅಧಿಕಾರಿಗಳ ಪ್ರಾಣಕ್ಕೆ ಕುತ್ತು ಬಂದಾಗ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವ ಸಂದರ್ಭದಲ್ಲಿ ಪೊಲೀಸರು ಪಿಸ್ತೂಲು ಬಳಸುತ್ತಾರೆ ಎಂದು ತಿಳಿಸಿದರು. ರಾಜ್ಯದಲ್ಲಿ 2013ರಿಂದ ಈವರೆಗೆ ದಲಿತರ ಮೇಲೆ 63 ಕೊಲೆ, 185 ಅತ್ಯಾಚಾರ ಪ್ರಕರಣ, 1882 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಡಿ.ಎಸ್.ವೀರಯ್ಯ ಅವರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.  ಪೊಲೀಸ್ ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಪ್ರಕರಣದ ತನಿಖೆ ವಿಳಂಬವಾಗುತ್ತದೆ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬವಾಗುವುದರಿಂದಲೂ ಕೂಡ ಇತ್ಯರ್ಥವಾಗದೆ ಪ್ರಕರಣಗಳು ಬಾಕಿ ಉಳಿದಿವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin