ಕೋರ್ಟ್ ಮೆಟ್ಟಿಲೇರಲು ಮುಂದಾದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ..!

ಈ ಸುದ್ದಿಯನ್ನು ಶೇರ್ ಮಾಡಿ

Congress--01
ಬೆಂಗಳೂರು, ಏ.16-ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು ರಾಷ್ಟ್ರ ಮತ್ತು ರಾಜ್ಯ ನಾಯಕರ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಆನಂದ್‍ಕುಮಾರ್ ಕೋರ್ಟ್ ಮೊರೆ ಹೋಗಲು ಮುಂದಾಗಿರುವ ನಾಯಕ.
ಕಾಂಗ್ರೆಸ್ ಮೇಲುಕೋಟೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ರೈತ ನಾಯಕ ದಿವಂಗ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್‍ಗೆ ಬೆಂಬಲ ಸೂಚಿಸಲು ಮುಂದಾಗಿದೆ. ಕೆಪಿಸಿಸಿ ರಾಜ್ಯದ 224 ಕ್ಷೇತ್ರಗಳಿಗೂ ಟಿಕೆಟ್ ನೀಡಲು ಅರ್ಜಿ ಆಹ್ವಾನಿಸಿತ್ತು. ಅದರಂತೆ ಮೇಲುಕೋಟೆ ಕ್ಷೇತ್ರದಲ್ಲೂ ಹಲವಾರು ಮಂದಿ ಪಕ್ಷ ನಿಗದಿಪಡಿಸಿರುವ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದೇವೆ. ಈಗ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಲ್ಲಿ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡದಿರುವುದು ಅನ್ಯಾಯಮಾಡಿದಂತಾಗಿದೆ. ಒಂದು ವೇಳೆ ಪುಟ್ಟಣ್ಣಯ್ಯ ಅವರ ಪುತ್ರನಿಗೆ ಬೆಂಬಲ ನೀಡುವುದಿದ್ದರೆ ಅರ್ಜಿ ಆಹ್ವಾನಿಸಬಾರದಿತ್ತು. ಅರ್ಜಿ ಆಹ್ವಾನಿಸಿ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸುವ ಮೂಲಕ ವಂಚನೆ ಮಾಡಲಾಗಿದೆ. ಇದನ್ನು ತಾವು ಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ಆನಂದ್‍ಕುಮಾರ್ ಹೇಳಿದ್ದಾರೆ.

ಏಕಾಂಗಿಯಾಗಿ ಕಾಂಗ್ರೆಸ್ ಕಚೇರಿ ಎದುರು ಪತಿಭಟನೆ ನಡೆಸಿದ ಅವರು, ನಾನು 25 ವರ್ಷಗಳಿಂದಲೂ ಕಾಂಗ್ರೆಸ್ ಯುವ ಘಟಕ, ಕಾರ್ಮಿಕ ಘಟಕ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಕಾರ್ಮಿಕನಾಗಿ, ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದೆ. ಕಾಂಗ್ರೆಸ್ ಪಕ್ಷದ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿದರೆ ನನ್ನ ಆಕ್ಷೇಪವಿರಲಿಲ್ಲ. ಯಾರಿಗೂ ಟಿಕೆಟ್ ನೀಡದೆ ಕಾಂಗ್ರೆಸ್‍ಗೆ ಸೇರದಿದ್ದವರಿಗೆ ಬೆಂಬಲ ನೀಡುವುದು ಸರಿಯಲ್ಲ. ಹಾಗಿದ್ದರೆ ಪುಟ್ಟಣ್ಣಯ್ಯ ಅವರ ಮಗನನ್ನು ಕಾಂಗ್ರೆಸ್‍ಗೆ ಸೇರಿಸಿಕೊಂಡು ಬೆಂಬಲ ನೀಡಿ ಎಂದು ಸವಾಲು ಹಾಕಿದರು. ರಾಜ್ಯ ಮಾಡಿರುವುದು ಅನ್ಯಾಯ ಮತ್ತು ವಂಚನೆಯಾಗಿದೆ. ಇದನ್ನು ತಾವು ಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ಆನಂದ್‍ಕುಮಾರ್ ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin