ಗುಂಡುಪ್ರಿಯರಿಗೊಂದು ಕಹಿ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Drinekrs--01

ಬೆಂಗಳೂರು, ಫೆ.20- ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗದಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಮದ್ಯದ ದರ ಇನ್ನಷ್ಟು ಹೆಚ್ಚಳವಾಗಲಿದೆ. ಇದರಿಂದ ಮದ್ಯ ಪ್ರಿಯರಿಗೆ ಮತ್ತಷ್ಟು ಕಿಕ್ ಹೊಡೆಯುವುದು ಬಹುತೇಕ ಖಚಿತ. ಮುಂದಿನ ತಿಂಗಳು 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 12ನೆ ಬಜೆಟ್‍ನಲ್ಲಿ ಮದ್ಯದ ದರವನ್ನು ಹೆಚ್ಚಳ ಮಾಡಲಿದ್ದಾರೆ.
2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000ರೂ. ಮುಖಬೆಲೆಯ ನೋಟುಗಳ ಅಮಾನೀಕರಣ ಮಾಡಿದ ನಂತರ ಮದ್ಯ ವ್ಯಾಪಾರ-ವಹಿವಾಟಿನಲ್ಲಿ ಭಾರೀ ಇಳಿಕೆ ಕಂಡಿದೆ.

ಇದು ನೇರವಾಗಿ ತೆರಿಗೆ ಸಂಗ್ರಹಕ್ಕೂ ಹೊಡೆತ ಬಿದ್ದಿದ್ದು, ಅಂದಾಜಿನ ಪ್ರಕಾರ, ಈ ಬಾರಿಯ ತೆರಿಗೆ ಸಂಗ್ರಹಣೆಯಲ್ಲಿ ಸುಮಾರು 3 ಸಾವಿರ ಕೋಟಿ ಕೊರತೆ ಎದುರಾಗಿದೆ.
2016-17ನೆ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದಲೇ ಸುಮಾರು 20 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ, ನವೆಂಬರ್ ಅಂತ್ಯಕ್ಕೆ 16,500 ಕೋಟಿ ತೆರಿಗೆ ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ.  500 ಹಾಗೂ 1000ರೂ. ನೋಟುಗಳ ಅಮಾನೀಕರಣದ ನಂತರ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗದಿರುವುದು ಒಂದುಕಡೆಯಾದರೆ ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿರುವುದು ಕೂಡ ಇದಕ್ಕೆ ಇನ್ನೊಂದು ಕಾರಣ.

ಈ ಬಾರಿ ರಾಜ್ಯದೆಲ್ಲೆಡೆ ಭೀಕರ ಬರಗಾಲ ಆವರಿಸಿದ ಪರಿಣಾಮ ಅನ್ನದಾತನಿಗೆ ಹೊಟ್ಟೆ ಹೊರೆದುಕೊಳ್ಳುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅನ್ನ, ನೀರು, ಮೇವಿಗೆ ಪರದಾಡುತ್ತಿರುವಾಗ ಇನ್ನು ಮದ್ಯ ಸೇವಿಸುವುದು ಬಹುದೊಡ್ಡ ಮಾತೇ ಸರಿ.   ಬೆಳೆದು ನಿಂತ ಬೆಳೆ ನಷ್ಟವಾದ ಪರಿಣಾಮ ಗ್ರಾಮೀಣ ಭಾಗಗಳಲ್ಲಂತೂ ಮದ್ಯ ಸೇವಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರು ಹಾಗೂ ಎರಡನೆ ಹಂತದ ನಗರಗಳಾದ ಮೈಸೂರು, ಮಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ವಿಜಯಪುರ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತಿತರ ನಗರಗಳಲ್ಲಿ ಮಾತ್ರ ಒಂದಿಷ್ಟು ವ್ಯಾಪಾರ ಸರಿಸುಮಾರಾಗಿ ನಡೆಯುತ್ತದೆ. ಉಳಿದಂತೆ ಹೋಬಳಿ, ತಾಲೂಕು ಮಟ್ಟದಲ್ಲಂತೂ ಮದ್ಯಪಾನ ವಹಿವಾಟು ಗಣನೀಯವಾಗಿ ಕುಸಿದಿದೆ.

ಬಿಯರ್ ಬದಲು ವಿಸ್ಕಿ ಕುಡಿಯಿರಿ:

ಇನ್ನೂ ತೆರಿಗೆ ಸಂಗ್ರಹವಾಗದ ಪರಿಣಾಮ ಅಬಕಾರಿ ಇಲಾಖೆ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳಿಗೆ ಬಿಯರ್ ಬದಲು ವಿಸ್ಕಿ ಕುಡಿಯಿರಿ ಎಂದು ಒತ್ತಡ ಹಾಕುತ್ತಿದ್ದಾರೆ.
ಮೇಲಧಿಕಾರಿಗಳ ಕಿರುಕುಳ ತಪ್ಪಿಸಿಕೊಳ್ಳಲು ಕೆಲವು ಕಡೆ ಮದ್ಯಪ್ರಿಯರಿಗೆ ಬಿಯರ್ ಬದಲು ವಿಸ್ಕಿ ನೀಡುತ್ತಿರುವ ಪ್ರಸಂಗಗಳು ಕೇಳಿಬಂದಿವೆ.  ಇನ್ನು ರಾಜ್ಯ ಮದ್ಯ ಮಾರಾಟಗಾರರ ಸಂಘವು ಕೂಡ ಈ ಬಾರಿಯ ಬಜೆಟ್‍ನಲ್ಲಿ ದರ ಹೆಚ್ಚಳ ಮಾಡಬೇಕೆಂದು ಈಗಾಗಲೇ ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯನವರಿಗೆ ಮನವಿ ಮಾಡಿದೆ.   ತೆರಿಗೆ ಸಂಗ್ರಹ ಕುಸಿತವನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯನವರು ಬಜೆಟ್‍ನಲ್ಲಿ ದರ ಏರಿಸುವ ಮೂಲಕ ಕಿಕ್ ಹೊಡೆಸುವುದು ಖಚಿತ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin