ಜಾರ್ಜ್ ರಾಜೀನಾಮೆ ಕೇಳುವ ಮೊದಲು ಬಿಎಸ್‍ವೈ ರಾಜೀನಾಮೆ ಕೊಡಿಸಿ : ಸಿಎಂ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa---Siddaramaiah-

ಬೆಂಗಳೂರು, ಅ.28- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಕೇಳುವ ಮೊದಲು ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಅವರ ಮೇಲೆ 420, ಫೋರ್ಜರಿ, ಡಿನೋಟಿಫಿಕೇಷನ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹಲವಾರು ಕ್ರಿಮಿನಲ್ ಮೊಕದ್ದಮೆಗಳಿವೆ. ಇದನ್ನು ನಾನು ಹುಟ್ಟಿಸಿಕೊಂಡು ಹೇಳುತ್ತಿಲ್ಲ. ಚುನಾವಣೆ ಆಯೋಗಕ್ಕೆ ಯಡಿಯೂರಪ್ಪ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಮೇಲಿರುವ ಕೇಸುಗಳ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಹಾಗೆಂದ ಮೇಲೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಲಿ. ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬೇರೆ ಎಂದು ಲೇವಡಿ ಮಾಡಿದರು. ಇಷ್ಟೆಲ್ಲಾ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವವರು ಒಂದು ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲು ಯೋಗ್ಯರಲ್ಲ ಎಂದು ಹೇಳಿದರು.

ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‍ಐಆರ್ ದಾಖಲಿಸಿದೆ. ದೂರುಗಳು ಬಂದಾಗ ಎಫ್‍ಐಆರ್ ದಾಖಲಾಗುವುದು ಸಾಮಾನ್ಯ. ಅದರ ವಿಚಾರಣೆ ನಡೆದು ಸಾಕ್ಷಿಗಳು ಸಾಬೀತಾದ ನಂತರ ಆರೋಪ ದೃಢಪಡುತ್ತದೆ. ಆದರೆ, ಆವರೆಗೂ ಆರೋಪ ಸಾಬೀತಾಗುವುದಿಲ್ಲ ಎಂದು ತಿಳಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜಾರ್ಜ್ ಪರವಾಗಿ ಮಾತನಾಡಿದ್ದಾರೆ ಎಂಬುದು ತಪ್ಪು. ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನೂ ಕೂಡ ಜಾರ್ಜ್ ಅವರನ್ನು ರಕ್ಷಣೆ ಮಾಡುತ್ತಿಲ್ಲ. ಕಾನೂನಿನ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.

ಜಾರ್ಜ್ ಅವರು ಸಿದ್ದರಾಮಯ್ಯ ಅವರಿಗೆ ಎಟಿಎಂ ಮಿಷನ್ ಇದ್ದಂತೆ. ಶಿಷ್ಯನ ರಕ್ಷಣೆಗೆ ಸಿದ್ದರಾಮಯ್ಯ ಪಣತೊಟ್ಟಿದ್ದಾರೆ ಎಂದು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಮಾತನಾಡಿದ್ದೇ ಆದರೆ, ಅವರಿಗೆ ಬುದ್ದಿ ಇಲ್ಲ ಎಂದು ಅರ್ಥ. ಜಾರ್ಜ್ ಅತ್ಯಂತ ಹಿರಿಯ ನಾಯಕರು. ಅವರು ನನ್ನ ಶಿಷ್ಯ ಎಂದು ಹೇಳುವುದು ಅಸಮಂಜಸ. ಇನ್ನು ಜಾರ್ಜ್ ಅವರು ಯಾರಿಗೂ ಎಟಿಎಂ ಮಿಷನ್ ಅಲ್ಲ. ಬಹುಶಃ ಯಡಿಯೂರಪ್ಪ ಅವರಿಗೆ ಶೋಭಾಕರಂದ್ಲಾಜೆ, ಶೋಭಾಕರಂದ್ಲಾಜೆ ಅವರಿಗೆ ಯಡಿಯೂರಪ್ಪ ಎಟಿಎಂ ಮಿಷನ್ ಇರಬಹುದು ಎಂದರು.

ಯಡಿಯೂರಪ್ಪ ಖುದ್ದಾಗಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಆರೋಪಿ. ಆದರೂ ಅವರಿಗೆ ಕಾನೂನಿನ ತಿಳುವಳಿಕೆ ಇಲ್ಲ. ಜಾರ್ಜ್ ಪ್ರಕರಣದಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಅವರ ತಟ್ಟೆಯಲ್ಲಿಯೇ ಹೆಗ್ಗಣ ಸತ್ತಿದ್ದರೂ ಬೇರೆಯವರ ತಟ್ಟೆಯಲ್ಲಿನ ನೊಣವನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು. ಈಗಾಗಲೇ ಗಣಪತಿ ಪ್ರಕರಣದ ಸಿಐಡಿ ವಿಚಾರಣೆ ನಡೆದು ಬಿ ವರದಿ ಸಲ್ಲಿಕೆಯಾಗಿದೆ. ಅದೇ ಪ್ರಕರಣಕ್ಕೆ ಜಾರ್ಜ್ ಈ ಮೊದಲೇ ನಾನು ಬೇಡ ಎಂದಿದ್ದರೂ ರಾಜೀನಾಮೆ ನೀಡಿದ್ದರು. ಈಗ ಮತ್ತೆ ರಾಜೀನಾಮೆ ನೀಡುವ ಅಗತ್ಯ ಇಲ್ಲ . ಹೊಸದಾಗಿ ತನಿಖೆ ನಡೆಸುತ್ತಿರುವ ಸಿಬಿಐ ಕೇಂದ್ರ ಸರ್ಕಾರದ ಸಂಸ್ಥೆ. ಅದರ ಮೇಲೆ ಜಾರ್ಜ್ ಪ್ರಭಾವ ಬೀರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ವಿವಿಧ ಕಾರ್ಯಕ್ರಮಕ್ಕೆ ಗೈರು:

ಬೀದರ್‍ನಲ್ಲಿ ನಾಳೆ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಳೆದ ಎರಡು ದಿನಗಳ ಹಿಂದೆ ನನಗೆ ಆಹ್ವಾನ ಪತ್ರಿಕೆ ತಂದು ಕೊಡಲಾಗಿದೆ. ಪೂರ್ವಭಾವಿಯಾಗಿ ಯಾವುದೇ ಚರ್ಚೆ ಮಾಡಿಲ್ಲ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಶೇ.50ರಷ್ಟು ಹಣ ನೀಡಲಿದೆ. ಉಚಿತವಾಗಿ ಭೂಮಿ ಕೂಡ ಕೊಡುತ್ತದೆ. ರೈಲ್ವೆ ಯೋಜನೆಗಳಿಗೆ ನಾವು ಪಾಲುದಾರರೂ ಕೂಡ. ಕಾರ್ಯಕ್ರಮ ಮಾಡುವ ಮೊದಲು ನಮ್ಮೊಂದಿಗೆ ಚರ್ಚೆ ಮಾಡಬೇಕಿತ್ತು ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಪರವಾಗಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಕಡ್ಡಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ. ಈ ನಿಲುವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು. ರಾಜ್ಯದಲ್ಲಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಯಾವುದೇ ಪ್ರಸ್ತಾವನೆಗಳು ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin