ಜೀವನದಲ್ಲಿ ಯಶಸ್ಸು ಕಾಣಬೇಕೆ..? ಹಾಗಾದರೆ ನಿಮಗೆ ಶತ್ರುಗಳಿರಲಿ

ಈ ಸುದ್ದಿಯನ್ನು ಶೇರ್ ಮಾಡಿ

life

ನಮ್ಮ ಜೀವನದ ವಿವಿಧ ಹಂತಗಳಲ್ಲಿ ಶತ್ರುಗಳಂತು ಇದ್ದೇ ಇರುತ್ತಾರೆ. ನಮ್ಮ ಶತ್ರುಗಳ ಚುಚ್ಚುಮಾತುಗಳು, ಅಣಕ ನಮ್ಮ ಮನಸ್ಸನ್ನು ಆ ಕ್ಷಣ ಮಾತ್ರ ನೋಯಿಸಬಹುದು. ಆದರೆ, ಆ ಮಾತುಗಳೇ ನಮ್ಮ ಜೀವನದ ಯಶಸ್ಸಿಗೆ ಮಾರ್ಗದರ್ಶಿಗಳು ಎಂಬುದನ್ನು ಮರೆಯಲೇಬಾರದು.  ಅವರು ನಮಗೆ ನೀಡುವ ಕಷ್ಟಗಳೇ ನಮ್ಮ ಮುಂದಿನ ಸುಂದರ ಭವಿಷ್ಯಕ್ಕೆ ಉತ್ತಮವಾದ ದಾರಿಯನ್ನು ತೋರಿಸುತ್ತವೆ. ನಮ್ಮ ಶತ್ರುಗಳು ನಮ್ಮನ್ನು ನೋಡುವ ಕೀಳು ದೃಷ್ಟಿಕೋನ, ನಮ್ಮನ್ನು ಮುಂದೊಂದು ದಿನ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು ಇಡೀ ವಿಶ್ವವೇ ನಮ್ಮನ್ನು ಹೆಮ್ಮೆಯಿಂದ, ಅಭಿಮಾನಪೂರ್ವಕ ದೃಷ್ಟಿಯಿಂದ ನೋಡಿ ಗೌರವಿಸುತ್ತದೆ.

ನಮ್ಮ ಶತ್ರುಗಳು, ನಮ್ಮಲ್ಲಿ ಅವರ ಸಾಧನೆ, ಯಶಸ್ಸಿನ ಬಗ್ಗೆ ಅಹಂಕಾರದಿಂದ ವಿವರಿಸುತ್ತ ನಮ್ಮನ್ನು ಅವಮಾನಿಸಿ, ಅಣಕಿಸಿದಾಗ ನಮ್ಮಲ್ಲಿರುವ ಸ್ವಾಭಿಮಾನ, ಧೈರ್ಯ, ಸಾಧಿಸಬೇಕೆಂಬ ಛಲ ಮತ್ತು ಆತ್ಮ ವಿಶ್ವಾಸ ಸಿಡಿದೇಳುತ್ತದೆ. ಆ ಕ್ಷಣ ನಮ್ಮಲ್ಲಿರುವ ಪ್ರಚಂಡ ಇಚ್ಛಾಶಕ್ತಿ ಅವರಿಗಿಂತ ನಾವೇನು ಕಡಿಮೆ, ನಾವು ಅವರಂತೆ ಮನುಷ್ಯರಲ್ಲವೆ? ಅವರಿಗಿಂತ ಹೆಚ್ಚಿನದ್ದನ್ನು ಮಾಡಬಾರದು  ಎಂಬ ಬದುಕನ್ನು ಬದಲಿಸಬಲ್ಲ ಪ್ರಶ್ನೆಗಳ ಮೂಲಕ ಅಚಲವಾದುದನ್ನು ಸಾಧಿಸುವಂತೆ ಪ್ರೇರೇಪಿಸುತ್ತದೆ.

ನಮ್ಮ ಶತ್ರುಗಳು ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿದಾಗ, ಟೀಕಿಸಿದಾಗ ನಾವು ಅವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ತಿದ್ದಿಕೊಂಡು ನಡೆದದ್ದೇ ಆದಲ್ಲಿ, ಆ ಶತ್ರುವೇ ಮುಂದೊಂದು ದಿನ ನಮ್ಮ ಸಾಧನೆಯನ್ನು ಕೊಂಡಾಡಿ ನಮ್ಮ ಕಾಲಿನ ಬುಡದ ಹತ್ತಿರ ಬೀಳುವಂತೆ ಮಾಡುತ್ತದೆ.
ಈ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಈ ವಚನ ನಮ್ಮ ನೆನಪಿಗೆ ಬರುತ್ತದೆ.
ಹೊಯಿದವರೆನ್ನ ಹೊರೆದವರೆಂಬೆ
ಬಯಿದವರೆನ್ನ ಬಂಧುಗಳೆಂಬೆ,
ನಿಂದಿಸಿದವರೆನ್ನ ತಂದೆ-ತಾಯಿಗಳೆಂಬೆ,
ಆಡಿಕೊಂಡವರೆನ್ನ ಆಳ್ದವರೆಂಬೆ,
ಜರಿದವರೆನ್ನ ಜನ್ಮ ಬಂಧುಗಳೆಂಬೆ,
ಹೊಗಳಿದವರೆನ್ನ ಹೊನ್ನ ಶೂಲಕ್ಕೇರಿಸಿದವರೆಂಬೆ,
ಕೂಡಲ ಸಂಗಮದೇವಾ.
ಈ ವಚನ ಅರ್ಥಗರ್ಭಿತವಾಗಿದ್ದು, ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕಾರಿಯಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin