ಡಿಸಿ ರೋಹಿಣಿ ಮತ್ತು ಸಚಿವ ಎ.ಮಂಜು ನಿಲ್ಲದ ಕೋಲ್ಡ್ ವಾರ್

ಈ ಸುದ್ದಿಯನ್ನು ಶೇರ್ ಮಾಡಿ

Rohini--01

ಶ್ರವಣಬೆಳಗೊಳ, ಫೆ.15- ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಹಾಗೂ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವೈಮನಸ್ಯ ಮುಂದು ವರೆದಿದೆ. ಮಸ್ತಕಾಭಿಷೇಕ ಕುರಿತಂತೆ ಶ್ರವಣಬೆಳಗೊಳದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಸಚಿವರು ಡಿಸಿ ವಿರುದ್ದ ರೇಗಿದ ಪ್ರಸಂಗ ನಡೆದಿದೆ. ಮಹಾ ಮಸ್ತಕಾಭಿಷೇಕ ಮಹೋತ್ಸವಕ್ಕೆ ಸಂಭಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಆರಂಭವಾಗುತ್ತಿದ್ದಂತೆ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭಿವೃದ್ಧಿ ಕುರಿತು ತಿಳಿಸಲು ಹೋದಾಗ ಹೆಚ್ಚು ಮಾತಾಡ ಬೇಡಮ್ಮ ಎಂದು ಗರಂ ಆದರು.

ಕೂಡಲೇ ಮಧ್ಯ ಪ್ರವೇಶಿಸಿದ ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷಾಧಿಕಾರಿ ನವೀನ್ ರಾಜ್‍ಸಿಂಗ್ ಸಚಿವರನ್ನು ಸಮಾಧಾನ ಪಡಿಸಿದರು. ಈ ಘಟನೆಯಿಂದ ಜಿಲ್ಲಾಧಿಕಾರಿ ಕೆಲ ಹೊತ್ತು ಮೂಕರಾಗಿ ಕುಳಿತರು.  ಈ ಘಟನೆಯ ನಂತರ ಬಂದ ಶಾಸಕ ಸಿ.ಎನ್.ಬಲಕೃಷ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆಯೂ ಕಾಮಗಾರಿಗಳ ಕುರಿತಂತೆ ಮಾತಿನ ಚಕಮಕಿ ನಡೆಯಿತು. ಶ್ರವಣಬೆಳಗೊಳದ ಒಳಗಡೆ ಇರುವ ರಸ್ತೆ ಅಭಿವೃದ್ಧಿಯ ಕುರಿತು ಮಾಹಿತಿ ಪಡೆಯುವಾಗ ಉಸ್ತುವಾರಿ ಸಚಿವರಿಗೆ ಚನ್ನರಾಯಪಟ್ಟಣದ ಲೋಕೋಪಯೋಗಿ ಇಲಾಖೆ ಅಭಿಯಂತ ಸುರೇಶ್ ನಾವು ಕಾಮಗಾರಿಯ ಅಂದಾಜು ಪಟ್ಟಿಯನ್ನು ನಿರ್ಮಿತಿ ಕೇಂದ್ರದವರಿಗೆ ನೀಡಿ ಮೇಲ್ವಿಚಾರಣೆ ನಾವು ನೋಡಿಕೊಳ್ಳುತ್ತಿದ್ದೇವೆ ಎಂದಾಗ. ನಿರ್ಮಿತಿ ಕೇಂದ್ರದ ಅಭಿಯಂತರನ್ನು ಸಭೆಗೆ ಕರೆಸಿ ಎಂದು ಪಟ್ಟು ಹಿಡಿದರು.

ಪಟ್ಟಣದ ಒಳಗಡೆ ರಸ್ತೆ ಅಭಿವೃದ್ಧಿಯಾಗದೇ ಹೋದರೆ ಹೇಗೆ. ಎಂದಾಗ ನೀವು ಮಾಹಿತಿ ಕೊಡಬೇಡಿ ಅಧಿಕಾರಿಗಳು ನೀಡಲಿ, ಕೆಲಸವನ್ನು ಅಧಿಕಾರಿಗಳು ಮಾಡಬೇಕು ಜನಪ್ರತಿನಿಧಿಗಳಾದ ನಾವು ಅದರ ಮೇಲ್ವಿಚಾರಣೆ ಮಾಡಬೇಕಷ್ಟೆ ಎಂದು ಹೇಳಿದರು. ಶಾಸಕರಾದ ತಮಗೂ ಜವಾಬ್ದಾರಿಯಿದೆ ಎಂದಾಗ ನಿಮ್ಮ ಹೆಚ್.ಡಿ.ದೇವೇಗೌಡರು ಕಮೀಷನ್ ತೆಗೆದುಕೊಳ್ಳುತ್ತಾನೆ ಎಂದು ದೂರುತ್ತಾರೆ ಎಂದರು. ಆಗ ಶಾಸಕರು ಅಟ್ಟಣಿಗೆಯ ಕಾಮಗಾರಿ ಟೆಂಡರ್ ನಮಗೆ ತಿಳಿದಿಲ್ಲ ಎಂದು ಉತ್ತರ ನೀಡಿದರು. ಟೆಂಡರ್ ಪ್ರಕ್ರಿಯೆಯನ್ನು ಅಧಿಕಾರಿಗಳು ಮಾಡುತ್ತಾರೆ ನಮಗೆ ಅದರ ಉಸಾಬರಿ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.  ಮತ್ತೆ ಮಧ್ಯ ಪ್ರವೇಶಿಸಿದ ನವೀನ್ ರಾಜ್‍ಸಿಂಗ್ ರಾಜಕಾರಣದ ವಿಚಾರ ಬೇಡ ಮಹಾಮಸ್ತಕಾಭಿಷೇಕ ಮಹೋತ್ಸವದ ವಿಚಾರ ಚರ್ಚಿಸೋಣ ಎಂದುಜ ಮಾತಿಗೆ ತೆರೆ ಎಳೆದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin