ತುಮಕೂರು ಜಿಲ್ಲೆಯ ರಾಜಕೀಯದಲ್ಲೂ ಎದ್ದಿದೆ ಬಿರುಗಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Tumakuru-Politics--01

ತುಮಕೂರು, ಸೆ.11- ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಅದನ್ನು ಅಸ್ಥಿರಗೊಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಳೆದ 10-15 ದಿನಗಳಿಂದ ಕುದುರೆ ವ್ಯಾಪಾರ ನಡೆಯುತ್ತಿರುವ ಬೆನ್ನಲ್ಲೇ ತುಮಕೂರು ಜಿಲ್ಲೆಯ ರಾಜಕೀಯದಲ್ಲೂ ಬಿರುಗಾಳಿ ಎದ್ದಿದೆ.

ಪಾವಗಡದಿಂದ ಆಯ್ಕೆಯಾಗಿ ಸಚಿವರಾಗಿರುವ ವೆಂಕಟರಮಣಪ್ಪ , ಶಿರಾದಿಂದ ಆರಿಸಿ ಬಂದಿರುವ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ್, ತುಮಕೂರು ಗ್ರಾಮಾಂತರ ಶಾಸಕರಾಗಿರುವ ಡಿ.ಸಿ.ಗೌರಿಶಂಕರ್, ಮಧುಗಿರಿ ಕ್ಷೇತ್ರದ ಮಾಜಿ ಶಾಸಕ -ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ಅವರನ್ನು ಆಪರೇಷನ್ ಕಮಲದ ಮೂಲಕ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂಬ ವದಂತಿ ಹಬ್ಬಿದ್ದು , ಜಿಲ್ಲೆಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.  ಡಿ.ಸಿ.ಗೌರಿಶಂಕರ್ ಸೇರ್ಪಡೆಗೆ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್‍ಗೌಡ ತೊಡರುಗಾಲಾಗಿದ್ದು , ಕೆ.ಎನ್.ರಾಜಣ್ಣ ಅವರನ್ನು ಸೆಳೆದು ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ರಾಜಣ್ಣ ಬಂದದ್ದೇ ಆದಲ್ಲಿ ಬಿಜೆಪಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗುವ ಜಾರಕಿಹೊಳಿ ಬ್ರದರ್ಸ್‍ಗೆ ಇನ್ನಷ್ಟು ಬಲ ಸಿಕ್ಕಂತಾಗುತ್ತದೆ. ಜಿಲ್ಲೆಯಲ್ಲಿ ಕಮಲ ಪಡೆಗೆ ಭಾರೀ ಶಕ್ತಿ ಬರುತ್ತದೆ. ಆಪರೇಷನ್ ಕಮಲದ ಉಸ್ತುವಾರಿಯನ್ನು ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಹೆಗಲಿಗೆ ವಹಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.  ಬಿ.ಸತ್ಯನಾರಾಯಣ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ನಿಕಟ ಸಂಪರ್ಕ ಹೊಂದಿದವರಾಗಿದ್ದರೂ ಸಚಿವ ಸಂಪುಟ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡು ರಾಜೀನಾಮೆ ಕೊಡಲು ಮುಂದಾಗಿದ್ದರು.

ಕಾರ್ಮಿಕ ಖಾತೆ ವೆಂಕಟರಮಣಪ್ಪ ಅವರಿಗೆ ತೃಪ್ತಿ ತಂದಿಲ್ಲ. ಹಾಗಾಗಿ ಅವರೂ ಕೂಡ ಹೊಸ್ತಿಲು ದಾಟಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.  ಮಾಜಿ ಸಂಸದ ಜಿ.ಎಸ್.ಬಸವರಾಜು ಕೂಡ ಆಪರೇಷನ್ ಕಮಲಕ್ಕೆ ಒತ್ತು ನೀಡಿದ್ದಾರೆ. ಒಟ್ಟಾರೆ ಎಲ್ಲಾ ಬೆಳವಣಿಗೆಯನ್ನು ಕಮಲ ಪಡೆ ಸದುಪಯೋಗಪಡಿಸಿಕೊಂಡು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಸಕಲ ಪ್ರಯತ್ನ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ವಿಷಯ ಹರಡುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin