ದ್ವೈವಾರ್ಷಿಕ ಸಭೆಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಭಾರತ ತೀವ್ರ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

pakistqan--01

ನವದೆಹಲಿ, ನ.11-ಗಡಿಯಲ್ಲಿ ಪಾಕಿಸ್ತಾನ ಸೇನೆಯಿಂದ ಪುನರಾವರ್ತಿತ ಕದನವಿರಾಮ ಉಲ್ಲಂಘನೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿರುವ ಮಧ್ಯೆಯೇ ದೆಹಲಿಯಲ್ಲಿ ಭಾರತದ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಮತ್ತು ಪಾಕ್ ಸೇನೆಯ ಮಹಾ ನಿರ್ದೇಶಕರುಗಳ ನಡುವೆ ದ್ವೈವಾರ್ಷಿಕ ಮೂರು ದಿನಗಳ ಸಭೆ ನಿನ್ನೆ ಮುಕ್ತಾಯಗೊಂಡಿದೆ. ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಗಡಿಯಾಚೆಯಿಂದ ನಿರಂತರವಾಗಿ ಯುದ್ಧ ವಿರಾಮಗಳ ಉಲ್ಲಂಘನೆ ಮತ್ತು ಪ್ರಚೋದನರಹಿತ ಗುಂಡಿನ ದಾಳಿ ಬಗ್ಗೆ ಭಾರತ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಪಾಕಿಸ್ತಾನದಿಂದ ಮಾದಕ ವಸ್ತುಗಳ ಕಳ್ಳಸಾಗಣೆ, ಗಡಿ ಮೂಲಕ ಉಗ್ರರ ಒಳನುಸುಳುವಿಕೆ ಯತ್ನಗಳು, ನಿಷೇಧಿತ ಪ್ರದೇಶಗಳಲ್ಲಿ ಸುರಂಗ ತೊಡುವಿಕೆ ಮತ್ತು ಅಕ್ರಮ ಕಟ್ಟಡಗಳನ್ನು ನಿರ್ಮಿಸುವಿಕೆ ಮೊದಲಾದ ವಿಷಯಗಳ ಬಗ್ಗೆ ಭಾರತ ಡಿಜಿ ಮಟ್ಟದ ಈ ಮಾತುಕತೆ ವೇಳೆ ಪ್ರಸ್ತಾಪಿಸಿ ತನ್ನ ಅಸಮಾಧಾನ ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನ.8,9 ಮತ್ತು 10ರಂದು ಮೂರು ದಿನಗಳ ಕಾಲ ನಡೆದ ಈ ಸಭೆಯಲ್ಲಿ ಉಭಯ ದೇಶಗಳ ಗಡಿ ಭಾಗಗಳಲ್ಲಿ ಉಗ್ರಗಾಮಿಗಳ ಉಪಟಳ ಮತ್ತು ಒಳನುಸುಳುವಿಕೆ ಯತ್ನಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವ ಬಗ್ಗೆಯೂ ಪ್ರಮುಖವಾಗಿ ಚರ್ಚಿಸಲಾಯಿತು. ಪಾಕಿಸ್ತಾನ ರೇಂಜರ್‍ಗಳ (ಸಿಂಧ್ ಪ್ರಾಂತ್ಯ) ಮಹಾ ನಿರ್ದೇಶಕ ಮೇಜರ್ ಜನರ್ ಮಹಮದ್ ಸಯೀದ್ ನೇತೃತ್ವದಲ್ಲಿ ಪಾಕಿಸ್ತಾನ ನಿಯೋಗದ 19 ಸದಸ್ಯರು ಹಾಗೂ ಬಿಎಸ್‍ಎಫ್‍ನ ಡಿಜಿ ಕೆ.ಕೆ.ಶರ್ಮ ನೇತೃತ್ವದಲ್ಲಿ ಭಾರತದ 23 ಉನ್ನತಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin