ನಾಳೆ ರಾಯಚೂರಿಗೆ ರಾಹುಲ್, ಮೊಳಗಲಿದೆ ಚುನಾವಣೆಗೆ ರಣಕಹಳೆ

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhin-01

ಬೆಂಗಳೂರು, ಆ.11-ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಈಗಲೇ ಭರ್ಜರಿ ತಯಾರಿ ನಡೆದಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ನಾಳೆ ರಾಜ್ಯಕ್ಕೆ ಆಗಮಿಸಲಿದ್ದು, ರಾಯಚೂರಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನದ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ.

ಅತ್ತ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ ಅವರು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬೆನ್ನಲ್ಲೇ ಇತ್ತ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಚುನಾವಣಾ ತಯಾರಿಗೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ರಾಜ್ಯ ಕಾಂಗ್ರೆಸ್ ಆಯೋಜಿಸಿರುವ ವಿಭಾಗವಾರು ಸಮಾವೇಶಗಳಲ್ಲಿ ಭಾಗವಹಿಸಲು ರಾಹುಲ್‍ಗಾಂಧಿ ಆಗಮಿಸುತ್ತಿದ್ದಾರೆ.

ಯುಪಿಎ ಸರ್ಕಾರವಿದ್ದಾಗ ಜಾರಿಗೊಳಿಸಿದ 371(ಜೆ) ಆ್ಯಕ್ಟ್ ಸೌಲಭ್ಯಗಳು, ರೂಪುರೇಷೆ, ಕಾಯ್ದೆ ಜಾರಿಯಿಂದ ಈ ಭಾಗದ ಜನರಿಗೆ ಆಗುವ ಪ್ರಯೋಜನ, ಮುಂತಾದವುಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶಕ್ಕೆ ಭರದ ಸಿದ್ದತೆ ನಡೆಯುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‍ಸೇಠ್ ಅವರು ಸಿದ್ದತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹೈದರಾಬಾದ್ ಭಾಗಕ್ಕೆ ಶಿಕ್ಷಣ, ಉದ್ಯೋಗ, ಅಭಿವೃದ್ಧಿ ದೃಷ್ಟಿಯಿಂದ 371(ಜೆ) ಕಲಂ ಜಾರಿಗೊಳಿಸುವಲ್ಲಿ ರಾಹುಲ್‍ಗಾಂಧಿಯವರು ಹೆಚ್ಚಿನ ಶ್ರಮ ವಹಿಸಿದ್ದು, ಈ ಉದ್ದೇಶದಿಂದ ಆಯೋಜಿಸಿರುವ ಈ ಸಮಾವೇಶದಲ್ಲಿ ವಿಶೇಷವಾಗಿ ರಾಹುಲ್‍ಗಾಂಧಿಯವರು ಮಾತನಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಮುಖಂಡರಾದ ಆಸ್ಕರ್ ಫರ್ನಾಂಡೀಸ್, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು ಸೇರಿದಂತೆ 2ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

371 (ಜೆ) ಕಲಂ ಜಾರಿಗೆ ಶ್ರಮಿಸಿದ ರಾಹುಲ್‍ಗಾಂಧಿಯವರಿಗೆ ಈ ಸಂದರ್ಭದಲ್ಲಿ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ. ನಂತರ ರಾಹುಲ್‍ಗಾಂಧಿಯವರು ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಲಿದ್ದು, ದೆಹಲಿಗೆ ಹಿಂತಿರುಗಲಿದ್ದಾರೆ.  ಇದೇ 16ರಂದು ಬೆಂಗಳೂರಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮತ್ತೆ ಆಗಮಿಸಲಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಪಕ್ಷ ಸಂಘಟನೆ, ಚುನಾವಣೆ ಸಿದ್ಧತೆ, ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಐಟಿ, ಇಡಿ ದಾಳಿಗಳು, ಕೇಂದ್ರದ ಎನ್‍ಡಿಎ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ರಾಹುಲ್‍ಗಾಂಧಿ ಮಾತನಾಡಲಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಬಗ್ಗೆ ಹುರಿದುಂಬಿಸಲಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin