ನಾವು ಯಾವುದೇ ಜಾತಿ, ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-CM

ಮೈಸೂರು, ಜು.29-ಯಾವುದೇ ಧರ್ಮವನ್ನಾಗಲಿ, ಜಾತಿಯನ್ನಾಗಲಿ ಒಡೆಯುವಂತಹ ಕೆಲಸವನ್ನು ತಾವು ಮಾಡುತ್ತಿಲ್ಲ, ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮಂಡಕ್ಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯಿತರು, ವೀರಶೈವರು ಇಬ್ಬರೂ ಸಹ ಪ್ರತ್ಯೇಕ ಧರ್ಮಕ್ಕಾಗಿ ನನಗೆ ಮನವಿ ಪತ್ರ ಕೊಟ್ಟಿದ್ದಾರೆ. ಆದ್ದರಿಂದ ಇಬ್ಬರೂ ಒಟ್ಟಾಗಿ ಬಂದರೆ ಚರ್ಚಿಸೋಣ ಎಂದು ಹೇಳಿದ್ದೇನೆ ಎಂಬುದಾಗಿ ತಿಳಿಸಿದರು.

ಮಾತೆ ಮಹಾದೇವಿ ಹಾಗೂ ವೀರಶೈವ ಮುಖಂಡರು ಪ್ರತ್ಯೇಕವಾಗಿ ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಚರ್ಚಿಸೋಣವೆಂದು ಹೇಳಿದ್ದೇನೆ. ಹಿಂದೆಯೂ ಯಾವುದೇ ಜಾತಿ, ಧರ್ಮ ಒಡೆಯುವ ಕೆಲಸ ಮಾಡಿಲ್ಲ. ಈಗಲೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ತಿಳಿಸಿದರು. ಈ ವಿಷಯದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಐದು ಮಂದಿ ಸಚಿವರ ಸಮಿತಿ ನೇಮಕ ಮಾಡಿದ್ದೀರಂತಲ್ಲ ಎಂಬ ವರದಿಗಾರರ ಪ್ರಶ್ನೆಗೆ ಸರ್ಕಾರದ ವತಿಯಿಂದ ಯಾವುದೇ ಸಮಿತಿ ರಚಿಸಿಲ್ಲ. ಅವರಾಗಿ ಅವರೇ ಐದು ಮಂದಿ ಸಚಿವರು ಅಭಿಪ್ರಾಯ ಸಂಗ್ರಹಿಸಲು ಹೋಗಿದ್ದಾರೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು.
ಸನಾತನ ಧರ್ಮದಿಂದ ಹಲವರು ಹೊರಹೋಗುತ್ತಿದ್ದಾರೆ. ಇದು ಬಿಜೆಪಿಯವರಿಗೆ ಭಯ ಉಂಟುಮಾಡಿದೆ. ಹಾಗಾಗಿ ಬಿಜೆಪಿಯವರು ನನ್ನ ಮೇಲೆ ಹಾಗೂ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ತಂದು ರೆಸಾರ್ಟ್‍ನಲ್ಲಿ ಇರಿಸಿಕೊಂಡಿದ್ದೀರಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಈ ವಿಷಯ ನನಗೆ ಗೊತ್ತಿಲ್ಲ ಎಂದು ಹೇಳಿದರು.  ಬೆಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆದಿದ್ದರಿಂದ ಮತೀಯವಾದಿಗಳು ತಲೆ ಎತ್ತದಂತೆ ಆಗಿದೆ. ಜಾತಿ ವ್ಯವಸ್ಥೆಯನ್ನು ತಡೆಯಲು ಈ ವಿಚಾರ ಸಂಕಿರಣ ಅನುಕೂಲವಾಗಿದೆ ಎಂದು ಹೇಳಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಟ್ರಿಬ್ಯುನಲ್ ಆದೇಶದಂತೆ ನೀರು ಬಿಡಲೇಬೇಕಿದೆ. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದು ನಮ್ಮ ಸರ್ಕಾರವನ್ನು ಟೀಕಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರಿಗೂ ಗೊತ್ತಿದೆ ಎಂದು ಹೇಳಿದರು.

ಆಗಸ್ಟ್ 5ರಂದು ಸರ್ವಪಕ್ಷಗಳ ಸಭೆ ಕರೆದು ನೀರು ಬಿಡುವ ವಿಚಾರವನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ, ಅವರು ಮೌನವಾಗಿದ್ದಾರೆ. ನಮ್ಮ ರಾಜ್ಯದ ಬಿಜೆಪಿ ಸಂಸದರು ಕೂಡ ಯಾವುದೇ ಒತ್ತಡ ಹೇರದೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

ಬರ ಪರಿಹಾರ:

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಶೇ.50ರಷ್ಟು ಹಾನಿಯಾದರೆ ಮಾತ್ರ ಪರಿಹಾರ ನೀಡಬಹುದು ಎಂದು ಕಾನೂನು ಮಾಡಿದ್ದಾರೆ. ಹಾಗಾಗಿ ಹೆಚ್ಚಿನ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು. ಖಾಲಿ ಇರುವ ಮೂರು ಮಂತ್ರಿಸ್ಥಾನ ಭರ್ತಿ ಮಾಡಲು ಕ್ರಮ ಕೈಗೊಂಡು ನಂತರ ಗೃಹ ಖಾತೆಯನ್ನು ಯಾರಿಗೆ ನೀಡಬೇಕೆಂಬುದನ್ನು ನಿರ್ಧರಿಸುವುದಾಗಿ ಸಿದ್ದರಾಮಯ್ಯ ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಮೆಟ್ರೋದಲ್ಲಿ ಕನ್ನಡ-ಇಂಗ್ಲಿಷ್:

ಮೆಟ್ರೋ ರೈಲಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಫಲಕ ಹಾಕುವಂತೆ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಇದೇ ವೇಳೆ ಸಿಎಂ ತಿಳಿಸಿದರು. ತಮಿಳುನಾಡಿನಲ್ಲಿ ತಮಿಳು ಹಾಗೂ ಇಂಗ್ಲಿಷ್ ಭಾಷೆ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಹಾಕುವಂತೆ ಮನವಿ ಮಾಡಲಾಗಿದೆ ಎಂದರು. ಸಚಿವ ಆಂಜನೇಯ, ಮೂಡ ಅಧ್ಯಕ್ಷ ಧೃವಕುಮಾರ್ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin