ಪಕ್ಷದ ಕಚೇರಿಯಲ್ಲಿ ‘ಗೇಮ್ ಪ್ಲಾನ್’ ರೆಡಿ ಮಾಡಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Game-Plan--01

ಬೆಂಗಳೂರು, ಮೇ 17-ಸದನದಲ್ಲಿ ಬಹುಮತ ಸಾಬೀತುಪಡಿಸಲು ಮುಂದಾಗಿರುವ ಬಿಜೆಪಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತಂತೆ ಇಂದು ಪಕ್ಷದ ಕಚೇರಿಯಲ್ಲಿ ರಣತಂತ್ರ ರೂಪಿಸಿತು. ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಜೆ.ಪಿ.ನಡ್ಡ, ಧರ್ಮೇಂದ್ರಪ್ರಧಾನ್, ಪ್ರಕಾಶ್ ಜಾವ್ಡೇಕರ್, ಅನಂತ್‍ಕುಮಾರ್, ಸದಾನಂದಗೌಡ, ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಸಂಸದರು, ನೂತನ ಶಾಸಕರೂ ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ರಾಜ್ಯಪಾಲರು 15 ದಿನಗಳೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಅಗತ್ಯ ಶಾಸಕರ ಸಂಖ್ಯೆಯನ್ನು ಹೊಂದಿಸಿಕೊಳ್ಳುವ ಬಗ್ಗೆ ಮಹತ್ವದ ಮಾತುಕತೆ ನಡೆಸಲಾಯಿತು. ಸರಳ ಬಹುಮತಕ್ಕೆ 8 ಶಾಸಕರ ಅಗತ್ಯವಿರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದೇ, ಇಲ್ಲವೇ ವಿಶ್ವಾಸ ಮತ ದಿನದಂದು ಕೆಲವು ಸದಸ್ಯರನ್ನು ಸದನಕ್ಕೆ ಬಾರದಂತೆ ಗೈರು ಹಾಜರು ಮಾಡಬೇಕೆ ಎನ್ನುವುದೂ ಸೇರಿದಂತೆ ಸಾಧ್ಯಾಸಾಧ್ಯತೆಗಳ ಕುರಿತು ಅಭಿಪ್ರಾಯ ಪಡೆಯಲಾಯಿತು.

ಸಂಪರ್ಕದಲ್ಲಿರುವ ಶಾಸಕರನ್ನು ಗೌಪ್ಯವಾಗಿ ಸೆಳೆದುಕೊಂಡು ಹೊರ ರಾಜ್ಯದ ರೆಸಾರ್ಟ್‍ನಲ್ಲಿ ಇಡುವುದೇ, ಇಲ್ಲವೇ ವಿಶ್ವಾಸ ಮತ ಯಾಚನೆ ವೇಳೆ ಸದನಕ್ಕೆ ಗೈರು ಹಾಜರಾಗುವಂತೆ ನೋಡಿಕೊಳ್ಳುವ ಬಗ್ಗೆಯೂ ಮುಖಂಡರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತೆರೆಮರೆಯಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖರೊಬ್ಬರು ತಮ್ಮ ಜತೆ ಸುಮಾರು 10ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸದೆ ವಿಶ್ವಾಸ ಮತದಿನದಂದು ಅವರನ್ನು ಸದನಕ್ಕೆ ಕರೆತರಬೇಕೇ, ಇಲ್ಲವೇ ಅದಕ್ಕೂ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ ಎಂಬ ಬಗ್ಗೆ ಮಾತುಕತೆ ಪ್ರಕ್ರಿಯೆಯಲ್ಲಿದೆ.

ಈ ಬಗ್ಗೆ ಬಹಿರಂಗವಾಗಿ ಯಾರೊಬ್ಬರೂ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಕಾರ್ಯಾಚರಣೆಗಿಳಿದಿರುವ ಪ್ರಮುಖರೊಬ್ಬರು ಸಭೆಯಲ್ಲಿ ತಿಳಿಸಿದ್ದಾರೆ. ಎರಡೂ ಪಕ್ಷಗಳಿಂದ ಎಷ್ಟು ಶಾಸಕರು ಬರಲು ಸಾಧ್ಯವಿದೆಯೋ ಅಷ್ಟೂ ಮಂದಿಯನ್ನು ಕರೆತಂದು ಸರ್ಕಾರ ಉಳಿಸಿಕೊಳ್ಳಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ರೂಪಿಸುವ ತಂತ್ರಕ್ಕೆ ನಿರಂತರವಾಗಿ ರಣತಂತ್ರವನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.  ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳದೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ಜವಾಬ್ದಾರಿ ವಹಿಸಿರುವವರು ಮಾತ್ರ ಕಾರ್ಯಾಚರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಮುಖಂಡರು ಸಲಹೆ ಮಾಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin