‘ಪರಿವರ್ತನಾ ಯಾತ್ರೆ’ ಸಮಾರೋಪಕ್ಕೆ ಬರುತ್ತಿರುವ ಮೋದಿ ಮಹದಾಯಿ ಬಗ್ಗೆ ಮಾತಾಡಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

MOdi--01
ಬೆಂಗಳೂರು,ಫೆ.2-ಭಾನುವಾರ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರು ಮಹದಾಯಿ ನದಿನೀರು ಹಂಚಿಕೆ ಸಂಬಂಧ ರಾಜ್ಯದ ಜನತೆಗೆ ಯಾವುದೇ ಭರವಸೆ ನೀಡುವ ಸಾಧ್ಯತೆಗಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರೋಕ್ಷವಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಪ್ರಧಾನಿಯವರು ಅಂದು ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ದಿಕ್ಸೂಚಿ ಭಾಷಣ ಮಾಡುವ ಸಂಭವವಿದೆ. ನನಗೆ ತಿಳಿದಂತೆ ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಮೋದಿ ಅವರಿಂದ ಯಾವುದೇ ಆಶ್ವಾಸನೆ ಸಿಗುವುದು ಕಷ್ಟಕರ ಎಂದರು.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಪೂರ್ವಸಿದ್ದತೆಗಳನ್ನು ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ , ಪ್ರಧಾನಿಯವರಿಂದ ರಾಜ್ಯಕ್ಕೆ ಯಾವುದೇ ಭರವಸೆ ಸಿಗುವ ಸಾಧ್ಯತೆಗಳಿಲ್ಲ ಎಂಬ ಸುಳಿವು ನೀಡಿದರು. ಪರಿವರ್ತನಾ ರ್ಯಾಲಿ ಹೊರತುಪಡಿಸಿ ಬೇರೆ ಯಾವುದೇ ವಿಚಾರದ ಬಗ್ಗೆ ಮೋದಿ ಮಾತನಾಡುವ ಸಾದ್ಯತೆಗಳಿಲ್ಲ. ಗೋವಾದ ಕಾಂಗ್ರೆಸ್ ಮಹದಾಯಿ ನದಿನೀರು ಯೋಜನೆಗೆ ಅಡ್ಡಿಪಡಿಸುತ್ತಿರುವುದರಿಂದ ಯೋಜನೆ ಅನುಷ್ಠಾನವಾಗುವುದು ಅವರಿಗೆ ಬೇಕಿಲ್ಲ ಎಂದು ಕಿಡಿಕಾರಿದರು.

ಅಸಾಧ್ಯದ ಮಾತು:

ಪ್ರಧಾನಿಯವರು ಆಗಮಿಸುವ ಸಂದರ್ಭದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್‍ಗೆ ಕರೆ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿ ಬರುತ್ತಿರುವಾಗ ಉದ್ದೇಶಪೂರ್ವಕವಾಗಿ ರಾಜ್ಯ ಸರ್ಕಾರ ಕನ್ನಡಪರ ಸಂಘಟನೆಗಳನ್ನು ಮುಂದಿಟ್ಟುಕೊಂಡು ಷಡ್ಯಂತರ ರೂಪಿಸಿದೆ ಎಂದು ದೂರಿದರು. ಯಾರು ಏನೇ ಅಡ್ಡಿಪಡಿಸಿದರೂ ಭಾನುವಾರದ ಪ್ರಧಾನಿ ಕಾರ್ಯಕ್ರಮ ನಿಲ್ಲುವುದಿಲ್ಲ. ಪ್ರಧಾನಿ ಕಾರ್ಯಕ್ರಮಕ್ಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಂದ್‍ಗೆ ಕರೆ ಕೊಡುವ ಮೂಲಕ ರಾಜ್ಯ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇದ್ಯಾವುದಕ್ಕೂ ಬಗ್ಗುವುದಿಲ್ಲ ಎಂದು ಹೇಳಿದರು. ಪರಿವರ್ತನ ಯಾತ್ರೆಗೆ 80*40 ಅಳತೆಯ ಬೃಹತ್ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ ಎಂದು ವಿವರಿಸಿದರು.

ರಾಜ್ಯಾದ್ಯಂತ 85 ದಿನಗಳ ಕಾಲ 11 ಸಾವಿರ ಕಿ.ಮೀ ಸಂಚರಿಸಲಾಗಿದೆ . ಸುಮಾರು ಒಂದು ಕೋಟಿ 75 ಲಕ್ಷ ಜನರನ್ನು ತಲುಪುದ್ದೇವೆ. ಯಾತ್ರೆಯೂ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಿದರು. ಪ್ರಧಾನಿ ಬಂದ ದಿನ ಅನ್ಯ ಪಕ್ಷಗಳ ಯಾವುದೇ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಇದನ್ನು ಮೋದಿಯವರು ಇಷ್ಟಪಡುವುದಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಪಕ್ಷದವರಿಂದ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.  ಈ ವೇಳೆ ಮುಖಂಡರಾದ ಶೋಭಾ ಕರಂದ್ಲಾಜೆ, ಆರ್.ಅಶೋಕ್ ಮತ್ತಿತರರು ಹಾಜರಿದ್ದರು.

ಅಷ್ಠಯಾಮ ಮಹಾಯಜ್ಞ:
ಇದೇ ವೇಳೆ ಪರಿವರ್ತನಾ ಯಾತ್ರೆ ಯಾವುದೇ ನಿರ್ವಿಘ್ನವಿಲ್ಲದಂತೆ ಯಶಸ್ವಿಯಾಗಿ ನಡೆಯಲು ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದಿಂದ ಅಷ್ಠಯಾಮ ಮಹಾಯಜ್ಞ ಹಮ್ಮಿಕೊಳ್ಳಲಾಗಿತ್ತು. ಪುಟ್ಟೇನಹಳ್ಳಿಯ ಶ್ರೀ ಸತ್ಯಗಣಪತಿ ದೇವಾಲಯದ ಆವರಣದಲ್ಲಿ ಮಹಾಯಜ್ಞವನ್ನು ಆಯೋಜಿಸಲಾಗಿತ್ತು. ಕಾನೂನು ಬಾಹಿರ ಕಸಾಯಿ ಖಾನೆ ಮತ್ತು ಗೋ ಹತ್ಯೆ ಖಂಡಿಸಿ 24 ಗಂಟೆಗಳ ಕಾಲ ಮಹಾಯಜ್ಞವನ್ನು ನಡೆಸಲಾಗುತ್ತದೆ.  ಈ ವೇಳೆ ಭಾನುವಾರದ ಪರಿವರ್ತನ ಯಾತ್ರೆಗೆ ಹಲವು ವಿಘ್ನಗಳು ಎದುರಾಗಿರುವುದರಿಂದ ಯಾವುದೇ ರೀತಿಯ ಅವಘಡ ಉಂಟಾಗದಂತೆ ಈ ಯಜ್ಞವನ್ನು ನಡೆಸಲಾಗುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin