ಪೊಲೀಸರಿಗೆ ಶರಣಾದ ‘ಪೆಟ್ರೋಲ್ ನಾರಾಯಣಸ್ವಾಮಿ’

ಈ ಸುದ್ದಿಯನ್ನು ಶೇರ್ ಮಾಡಿ

NarayanaSwamy-Arrested-Petr

ಬೆಂಗಳೂರು, ಫೆ.23- ಅಕ್ರಮ ಖಾತೆ ಮಾಡಿಕೊಡದ ಅಧಿಕಾರಿ ವರ್ತನೆಯಿಂದ ತಾಳ್ಮೆ ಕಳೆದುಕೊಂಡು ಬಿಬಿಎಂಪಿ ಕಚೇರಿಗೆ ನುಗ್ಗಿ ಕಡತಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಶಾಸಕ ಬೈರತಿ ಬಸವರಾಜ್ ಭಂಟ ಪೆಟ್ರೋಲ್ ನಾರಾಯಣಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ.  ಕೆಆರ್ ಪುರಂ ಸಮೀಪದ ಹೊರಮಾವು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ನುಗ್ಗಿ ಕರ್ತವ್ಯನಿರತ ಅಧಿಕಾರಿ ಚಂಗಲ್‍ರಾಯಪ್ಪ ಅವರನ್ನು ನಿಂದಿಸಿ ಕಡತಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ಹಾಕಿ ಪರಾರಿಯಾಗಿದ್ದ. ಈ ಕುರಿತಂತೆ ಬಿಬಿಎಂಪಿ ಕಂದಾಯ ಅಧಿಕಾರಿ ಸತೀಶ್‍ಕುಮಾರ್ ಎಂಬುವವರು ನೀಡಿದ ದೂರು ಆಧರಿಸಿ ನಾರಾಯಣಸ್ವಾಮಿ ಬಂಧನಕ್ಕೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಬೆಂಗಳೂರು ಜಲಮಂಡಳಿ ಸದಸ್ಯನಾಗಿದ್ದೇ ಅಲ್ಲದೆ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾರಾಯಣಸ್ವಾಮಿಯನ್ನು ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರೇ ಸೂಚಿಸಿದ್ದರು.

ಹೀಗಾಗಿ ಘಟನೆ ಸಂಭವಿಸಿದ ದಿನದಿಂದ ನಾಪತ್ತೆಯಾಗಿದ್ದ ನಾರಾಯಣಸ್ವಾಮಿ ಕಾನೂನು ಸಂಕೋಲೆಯಿಂದ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಅರಿವಾಗುತ್ತಿದ್ದಂತೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ. ಆರೋಪಿ ನಾರಾಯಣಸ್ವಾಮಿ ವಿರುದ್ಧ ಹಲ್ಲೆ ಯತ್ನ (353), ಆಸ್ತಿ ನಷ್ಟ (427), ಅತಿಕ್ರಮ ಪ್ರವೇಶ (341), ಶಾಂತಿ ಕದಡಿದ ಆರೋಪ (504) ಹಾಗೂ ಸರ್ಕಾರಿ ಅಧಿಕಾರಿಗೆ ಜೀವ ಬೆದರಿಕೆ (506) ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ದಕ್ಷ ಅಧಿಕಾರಿಯಾಗಿರುವ ಚಂಗಲ್‍ರಾಯಪ್ಪ ಅವರಿಗೆ ಜೀವ ಬೆದರಿಕೆ ಹಾಕಿದ್ದ ನಾರಾಯಣಸ್ವಾಮಿಯನ್ನು ಮೂರು ದಿನದೊಳಗೆ ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿತ್ತು. ರಾಜಕೀಯದ ಹಿನ್ನೆಲೆ ಹೊಂದಿರುವ ನಾರಾಯಣಸ್ವಾಮಿ ಅವರನ್ನು ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಬಿಬಿಎಂಪಿ ಕಚೇರಿಯ ಕೆಲಸ-ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘ ಆಗ್ರಹಿಸಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin