ಬಿಜೆಪಿಯಿಂದ ‘ಜಾರ್ಜ್’ ಅಸ್ತ್ರ ಪ್ರಯೋಗ : ಬೆಳಗಾವಿ ಅಧಿವೇಶನದ ಮೇಲೆ ಕಾರ್ಮೋಡ

ಈ ಸುದ್ದಿಯನ್ನು ಶೇರ್ ಮಾಡಿ

Suvarna--02

ಬೆಂಗಳೂರು,ಅ.30-ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿ ಸ್ಥಾನದಲ್ಲಿರುವ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಮುಂಬರುವ ಬೆಳಗಾವಿ ಅಧಿವೇಶನಕ್ಕೆ ಕಾರ್ಮೋಡ ಕವಿಯುವ ಸಂಭವವಿದೆ. ಈಗಾಗಲೇ ಸಿಬಿಐನಿಂದ ಎಫ್‍ಐಆರ್ ದಾಖಲಾಗಿದ್ದು, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಮೊದಲನೇ ಆರೋಪಿಯಾಗಿದ್ದಾರೆ. ಪ್ರತಿಪಕ್ಷ ಬಿಜೆಪಿ ಇದನ್ನೇ ಅಸ್ತ್ರವಾಗಿಟ್ಟುಕೊಂಡು ಅವರ ತಲೆದಂಡಕ್ಕೆ ಪಟ್ಟು ಹಿಡಿದಿದೆ.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಕಾಂಗ್ರೆಸ್ ಸರ್ಕಾರವೇ ಜಾರ್ಜ್ ಬೆಂಬಲಕ್ಕೆ ನಿಂತಿರುವುದು ಪ್ರತಿಪಕ್ಷಗಳನ್ನು ಕೆರಳುವಂತೆ ಮಾಡಿದೆ. ಜಾರ್ಜ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸದಂತೆ ಕೇಂದ್ರ ಬಿಜೆಪಿ ನಾಯಕರು ಸೂಚನೆ ಕೊಟ್ಟಿದ್ದಾರೆ. ನ.2ರಿಂದ ಪ್ರಾರಂಭವಾಗಲಿರುವ ನವ ಕರ್ನಾಟಕ ಪರಿವರ್ತನಾ ರಥ ಯಾತ್ರೆಯಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸುವಂತೆ ಸೂಚಿಸಲಾಗಿದೆ.
ಗುರುವಾರದಿಂದ ಸುಮಾರು 75ರಿಂದ 80 ದಿನಗಳ ಕಾಲ ಬಿಜೆಪಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪರಿವರ್ತನಾ ರಥಯಾತ್ರೆ ನಡೆಸಲಿದೆ. ಈ ವೇಳೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜಾರ್ಜ್ ಅವರ ಪ್ರಕರಣವೇ ಪ್ರಚಾರದ ಪ್ರಮುಖ ಅಸ್ತ್ರವಾಗಲಿದೆ ಎಂದು ತಿಳಿದುಬಂದಿದೆ.

ಚುನಾವಣಾ ಸಂದರ್ಭದಲ್ಲಿ ಕೈ ಸಿಕ್ಕಿರುವ ಅಸ್ತ್ರವನ್ನು ಕೈ ಬಿಟ್ಟರೆ ಮುಂದೆ ಇಂತಹ ಮತ್ತೊಂದು ಪ್ರಕರಣ ಸಿಗುವುದಿಲ್ಲ ಎಂಬುದನ್ನು ಮನಗಂಡಿರುವ ಬಿಜೆಪಿ ನಾಯಕರು ಕಬ್ಬಿಣ ಕಾದಾಗಲೇ ಹಣಿಯಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿಂದೆ ಬಿಜೆಪಿ ನಾಯಕರ ಕೆಲವು ಪ್ರಕರಣಗಳನ್ನೇ ಮುಂದಿಟ್ಟುಕೊಂಡು ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಸದನದ ಒಳಗೆ ಮತ್ತು ಹೊರಗೆ ವಾಚಾಮಗೋಚರವಾಗಿ ಟೀಕಾ ಪ್ರಹಾರ ಮಾಡಿದ್ದರು. ಈಗ ಇದೇ ಅಸ್ತ್ರವನ್ನು ಸಿದ್ದರಾಮಯ್ಯ ವಿರುದ್ದ ಪ್ರಯೋಗಿಸಲು ಕಮಲ ಪಡೆ ಪ್ರಯೋಗಿಸಿದೆ.

ನ.13ರಿಂದ ಗಡಿಜಿಲ್ಲೆ ಬೆಳಗಾವಿಯಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಅಷ್ಟರೊಳಗೆ ಜಾರ್ಜ್ ಅವರಿಂದ ರಾಜೀನಾಮೆ ಪಡೆದರೆ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ. ಒಂದು ವೇಳೆ ಸಿದ್ದರಾಮಯ್ಯ ತಮ್ಮ ತೀರ್ಮಾನಕ್ಕೆ ಕಟಿಬಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಇದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯುವುದು ಖಚಿತ. ಅಧಿವೇಶನದ ಮೊದಲ ದಿನವೇ ಇದೇ ವಿಷಯವನ್ನು ಪ್ರಶ್ನಿಸಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಯಾವುದೇ ಕಾರಣಕ್ಕೂ ಜಾರ್ಜ್ ತಲೆದಂಡವಾಗುವವರೆಗೂ ಹೋರಾಟ ನಿಲ್ಲಿಸಬಾರದು ಎಂಬುದು ಬಿಜೆಪಿಯ ಒಂದಂಶದ ಕಾರ್ಯಕ್ರಮ.

ಅಧಿವೇಶನದಲ್ಲಿ ಜಾರ್ಜ್ ಇಕ್ಕಟ್ಟಿಗೆ ಸಿಲುಕಿಸಲು ಕೈಗೊಳ್ಳಬೇಕಾದ ರಣತಂತ್ರಗಳು, ಶಾಸಕರ ಒಗ್ಗಟ್ಟು ಪ್ರದರ್ಶನ, ಉಭಯ ಸದನಗಳಲ್ಲೂ ಸರ್ಕಾರದ ವಿರುದ್ದ ರಣ ಕಹಳೆ ಸೇರಿದಂತೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಪರಿವರ್ತನಾ ರಥಯಾತ್ರೆಯ ಮೊದಲ ವಾರದ ನಂತರ ಅಧಿವೇಶನದಲ್ಲಿ ನಡೆಸಬೇಕಾದ ಹೋರಾಟಗಳ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯಲಿದೆ. ಒಟ್ಟಿನಲ್ಲಿ ಜಾರ್ಜ್ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲು ಸಜ್ಜಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin