ಬೆಂಗಳೂರಲ್ಲಿ ಮಧ್ಯರಾತ್ರಿ ಸುರಿದ ಮಳೆ ಸೃಷ್ಟಿಸಿತು ಅವಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Bang-Rain

ಬೆಂಗಳೂರು, ಸೆ.1-ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ ನಗರದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ರಾತ್ರಿ 11 ಗಂಟೆಗೆ ಆರಂಭವಾದ ಮಳೆ ಸುಮಾರು ಮೂರು ಗಂಟೆಗಳ ಕಾಲ ನಿರಂತರವಾಗಿ ಸುರಿದ ಹಿನ್ನೆಲೆಯಲ್ಲಿ 14 ತಗ್ಗುಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಕಾರಣವಾಗಿದ್ದು, ಎಂಟು ಕಡೆ ಮರ ಉರುಳಿ ಬಿದ್ದಿವೆ. ಪೂರ್ವ, ಬೊಮ್ಮನಹಳ್ಳಿ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಆ ಭಾಗದಲ್ಲಿ ಹೆಚ್ಚು ಅನಾಹುತ ಸಂಭವಿಸಿವೆ. ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಮೀಪದ ಗುನ್ನೀನಾಐರೀಸ್ ಅಪಾರ್ಟ್‍ಮೆಂಟ್ ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲಿನ 40ಕ್ಕೂ ಹೆಚ್ಚು ಕುಟುಂಬಗಳು ಮನೆಯಿಂದ ಹೊರಬರಲಾರದೆ ಪರಿತಪಿಸುವಂತಾಗಿದೆ.

Puru 03

ಇಂದು ಬೆಳಗ್ಗೆ ಕೂಡ ಅಪಾರ್ಟ್‍ಮೆಂಟ್ ನೆಲಮಹಡಿ ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳು ಮತ್ತು ಬಿಲ್ಡರ್‍ಗೆ ಹಿಡಿಶಾಪ ಹಾಕುತ್ತಿದ್ದರು. ಹೆಣ್ಣೂರು ಮುಖ್ಯರಸ್ತೆಯ ಸಿಎಂಆರ್ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಾಹನ ಸವಾರರು ಭಾರೀ ಮಳೆ ನಡುವೆಯೂ ಪರದಾಡುವಂತಾಗಿತ್ತು. ಕೆ.ಆರ್.ಸರ್ಕಲ್ ಸಮೀಪದ ಅಂಡರ್‍ಪಾಸ್‍ನಲ್ಲಿ ನೀರು ತುಂಬಿಕೊಂಡು ಕಾರೊಂದು ಸಿಲುಕಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅದೇ ರೀತಿ ಶಿವಾನಂದವೃತ್ತ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ಬಸವನಗುಡಿ, ರಾಜಾಜಿನಗರ ಮತ್ತಿತರ ಪ್ರದೇಶಗಳಲ್ಲಿ ಮಳೆಯಿಂದ ನಾಗರಿಕರು ಸಾಕಷ್ಟು ಅನಾಹುತ ಎದುರಿಸುವಂತಾಯಿತು.

Puru 01

ಜಾರ್ಜ್-ಮೇಯರ್ ಕಾರ್ಯಾಚರಣೆ:

ರಾತ್ರಿ 11 ಗಂಟೆ ಸುಮಾರಿಗೆ ಜೋರು ಮಳೆಯಾಗುವುದನ್ನು ಗಮನಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ದೌಡಾಯಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅನಾಹುತ ಪ್ರದೇಶಗಳಿಗೆ ನಿಯಂತ್ರಣ ಕೊಠಡಿಯಲ್ಲಿದ್ದ ಹೆಚ್ಚುವರಿ ಸಿಬ್ಬಂದಿಯನ್ನು ರವಾನಿಸುವಂತೆ ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

Mayor  03

ಬೆಳಗಿನ ಜಾವ 2.30ಕ್ಕೆ ಜಾರ್ಜ್ ಅವರು ಮನೆಗೆ ತೆರಳುತ್ತಿದ್ದಂತೆ ನಿಯಂತ್ರಣ ಕೊಠಡಿಗೆ ಆಗಮಿಸಿದ ಮೇಯರ್ ಜಿ.ಪದ್ಮಾವತಿ ಅವರು ಮುಂಜಾನೆವರೆಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

Puru 10

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin