ಬೆಲೆ ಏರಿಕೆ ನಡುವೆಯೂ ವರಮಹಾಲಕ್ಷ್ಮಿ ಪೂಜೆ ಜೋರು

ಈ ಸುದ್ದಿಯನ್ನು ಶೇರ್ ಮಾಡಿ

Varamahalaxm,i-01
ಬೆಂಗಳೂರು, ಆ.3- ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದರೂ ಅನಿವಾರ್ಯವಾಗಿ ಹೂವು-ಹಣ್ಣು ಮತ್ತಿತರ ವಸ್ತುಗಳನ್ನು ಜನರು ಖರೀದಿಸಿದ್ದಾರೆ.
ಈ ಬಾರಿ ಸರಿಯಾಗಿ ಮಳೆಯಾಗದೆ ಬಹುತೇಕ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹೂವು-ಹಣ್ಣು ಬೆಳೆಗೆ ಹೊಡೆತ ಬಿದ್ದಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಹಾಗಾಗಿ ಕಳೆದ ಬಾರಿಗಿಂತ ಎಲ್ಲಾ ಹಣ್ಣುಗಳು ಹಾಗೂ ಹೂವುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.  ಆದರೂ ಸೋಮವಾರದಿಂದಲೇ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬ ಹಾಗೂ ಶ್ರಾವಣ ಶನಿವಾರದ ಪೂಜೆಗಾಗಿ ವಿವಿಧ ವಸ್ತುಗಳನ್ನು ಖರೀದಿಸಿದ್ದಾರೆ.

ಪ್ರಮುಖವಾಗಿ ಪೂಜೆಗೆ ಉಪಯೋಗಿಸುವ ಬಾಳೆಹಣ್ಣಿನಿಂದ ಹಿಡಿದು ಎಲ್ಲ ರೀತಿಯ ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಾಪ್‍ಕಾಮ್ಸ್‍ನಲ್ಲಿ ಆಯ್ದ ಹಣ್ಣುಗಳ ಮೇಲೆ ಶೇ.5ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂದಿನಿಂದ ಕೆಲ ದಿನಗಳ ಕಾಲ ಮಾತ್ರ ರಿಯಾಯಿತಿ ಇರುತ್ತದೆ. ನಿನ್ನೆಯಿಂದಲೇ ಕೆಆರ್ ಮಾರುಕಟ್ಟೆಯಲ್ಲಿ ಕಾಲಿಡಲೂ ಆಗದಷ್ಟು ಜನಸಂದಣಿ ತುಂಬಿದ್ದು, ಬೆಲೆ ಏರಿಕೆ ನಡುವೆಯೂ ವ್ಯಾಪಾರದ ಭರಾಟೆ ನಡೆದಿತ್ತು. ಇನ್ನು ನಗರದ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳ ಫುಟ್‍ಪಾತ್, ವೃತ್ತಗಳಲ್ಲೂ ಮಾವು, ಬಾಳೆಕಂದು, ಹೂವು, ಹಣ್ಣುಗಳ ರಾಶಿ ಹಾಕಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಸಹ ಆಗಿತ್ತು.

ಕೆಆರ್ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವು ಕೆಜಿಗೆ 550 ರಿಂದ 620ರೂ. ವರೆಗೆ ಇದ್ದರೆ ಮಲ್ಲೆ ಹೂವು 500ರ ಗಡಿ ದಾಟಿತ್ತು. ಕನಕಾಂಬರ 1600, ಸೇವಂತಿಗೆ 275 ರಿಂದ 325, ಗುಲಾಬಿ 350, ಕಣಗಿಲೆ 300, ಸುಗಂಧರಾಜ ಸುಮಾರು 275ರೂ. ಇದ್ದರೆ ವರಮಹಾಲಕ್ಷ್ಮಿಯ ಕಳಶಕ್ಕೆ ವಿಶೇಷವಾಗಿ ಮುಡಿಸುವ ತಾವರೆ ಹೂವು ಜೋಡಿಗೆ 100ರೂ.ವರೆಗೆ ತಲುಪಿತ್ತು. ಕೇದಗೆ ಕೆಜಿಗೆ 50 ರಿಂದ 80ರೂ. ಇತ್ತು. ಇದು ಹೂವಿನ ಬೆಲೆಯಾದರೆ ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಏಲಕ್ಕಿ ಬಾಳೆಹಣ್ಣು 120ರೂ. ದಾಟಿದ್ದರೆ, ಪಚ್ಚಬಾಳೆಹಣ್ಣು ಕೆಜಿಗೆ 35ರೂ. ಇದೆ. ಸೀತಾಫಲ 70ರೂ., ದಾಳಿಂಬೆ 120 ರಿಂದ 140ರೂ., ನೀಲಿ ದ್ರಾಕ್ಷಿ 90ರೂ. ಸೀಡ್‍ಲೆಸ್ ದ್ರಾಕ್ಷಿ 180ರೂ., ಮೂಸಂಬಿ 75ರೂ., ಮರಸೇಬು 200ರೂ., ಅನಾನಸ್ 60ರೂ., ನೀಲಂ ಮಾವಿನ ಹಣ್ಣು 80 ರಿಂದ 100ರೂ. ಇದೆ.  ಇಷ್ಟೆಲ್ಲ ಬೆಲೆ ಏರಿಕೆ ನಡುವೆಯೂ ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಿರುವ ಹಬ್ಬ-ಹರಿದಿನಗಳನ್ನು ಬಿಡಲಾರದೆ ಸಾರ್ವಜನಿಕರು ಹೂವು-ಹಣ್ಣು ಮತ್ತಿತರ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin