ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ದಿದ್ದೇ ಸಿಎಂ : ಸಿದ್ದು ವಿರುದ್ಧ ಬಿಎಸ್ವೈ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

yadi

ಬೆಂಗಳೂರು,ಮೇ 11-ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಷ್ಟ್ರದಲ್ಲೇ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ದಿದ್ದೇ ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹಾನ್ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಎನ್‍ಜಿಒ ಸಂಸ್ಥೆ ನಡೆಸುತ್ತಿರುವ ಸಮೀಕ್ಷೆಯಲ್ಲಿ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಪಡೆದಿದೆ. ಭ್ರಷ್ಟಾಚಾರ ಮುಕ್ತ ಇದೇ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಸರ್ಕಾರ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಲೇವಡಿ ಮಾಡಿದರು.   ರಾಜ್ಯ ಸರ್ಕಾರದ ವೈಫಲ್ಯಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಸಹಕಾರಿ ಸಂಘದಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು, ಇಲ್ಲದಿದ್ದರೆ ಜನ ಬೀದಿಗೆ ಇಳಿಯುವುದು ನಿಶ್ಚಿತ ಎಂದು ಎಚ್ಚರಿಸಿದರು.

ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ. ಮೊದಲು ನಿಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿ ತದನಂತರ ಕೇಂದ್ರದ ಮೇಲೆ ಬೊಟ್ಟು ಮಾಡಿ ಎಂದರು.  ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ರೈತರ ಸಾಲ ಮನ್ನಾ ಮಾಡಿವೆ. ಯಾವುದೇ ಮುಖ್ಯಮಂತ್ರಿ ಕೇಂದ್ರದತ್ತ ಬೊಟ್ಟು ಮಾಡಿ ಆಗೇ ಕುಳಿತಿಲ್ಲ. ನೀವು ಮಾತ್ರ ಯಾವ ಕಾರಣಕ್ಕೆ ಮೊಂಡು ಹಠ ಹಿಡಿದಿದ್ದೀರಿ ಎಂದು ಪ್ರಶ್ನಿಸಿದರು.  ಪ್ರಧಾನಿ ಅವರನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಿದ್ದೀರಿ, ಉತ್ತರಪ್ರದೇಶದ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯನವರು ಮೊದಲು ಕೇಂದ್ರ ಸರ್ಕಾರ ಅರ್ಧದಷ್ಟು ಸಾಲ ಮನ್ನಾ ಮಾಡಲಿ ಎಂದು ಸಬೂಬು ಹೇಳುತ್ತಿದ್ದಾರೆ. ರೈತರ ಬಗ್ಗೆ ಇರುವ ಕಾಳಜಿ ಇದೇನಾ ಎಂದು ಕಿಡಿಕಾರಿದರು.


ರಾಜ್ಯ ಸರ್ಕಾರ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಾಡುಹಗಲೇ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆ, ಸುಲಿಗೆ ಪ್ರಕರಣಗಳು ನಡೆಯುತ್ತಿದ್ದರೂ ಸರ್ಕಾರ ನಿದ್ರಾವಸ್ಥೆಯಲ್ಲಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಬರಗಾಲಕ್ಕೆ ಬಿಡುಗಡೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ನರೇಗಾ ಎನ್‍ಡಿಆರ್‍ಎಫ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಬಿಡಗುಡೆಯಾಗಿರುವ ಹಣ ಹಾಗೆಯೇ ಉಳಿದಿದೆ ಎಂದು ಆರೋಪಿಸಿದರು.  ಇದೇ 18ರಂದು ತುಮಕೂರಿನಿಂದ ಮುಂದಿನ ತಿಂಗಳು 26ರವರೆಗೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಸಾರ್ವಜನಿಕರ ಜೊತೆ ಸಂಪರ್ಕ ನಡೆಸಲಾಗುವುದು. ಆ ಮೂಲಕವಾದರೂ ಸರ್ಕಾರವನ್ನು ಬಡಿದ್ದೆಬ್ಬಿಸುವ ಕೆಲಸ ಮಾಡುತ್ತೇವೆ ಎಂದರು.

ಜನಾದೇಶ ಅಲ್ಲ:

ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಗುಂಡ್ಲುಪೇಟೆ -ನಂಜನಗೂಡು ಉಪಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿ ಅವರ ಅಹಂಕಾರ ಇನ್ನಷ್ಟು ಹೆಚ್ಚಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ರಾಜಕೀಯ ಚಿತ್ರಣ ಬದಲಾಗಲಿದೆ. ಮುಖ್ಯಮಂತ್ರಿ ಅವರು ಅದನ್ನು ಮರೆಯಬಾರದು ಎಂದರು.  ಫಲಿತಾಂಶಕ್ಕೂ ಮುನ್ನ ಜನಾದೇಶ ಅಲ್ಲ ಎನ್ನುತ್ತಿದ್ದ ಸಿಎಂ ಅವರು ಫಲಿತಾಂಶ ಬರುತ್ತಿದ್ದಂತೆ ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಚುನಾವಣೆ ಹೇಗೆ ನಡೆಸಿದ್ದೀರಿ ಎಷ್ಟು ಹಣ ಖರ್ಚಾಗಿದೆ ಎಂಬುದು ಗೊತ್ತು. ಇದರಿಂದ ಜಾಸ್ತಿ ಬೀಗುವುದು ಬೇಡ ಎಂದರು. ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಜಾಹಿರಾತು ನೀಡಿದ ತಕ್ಷಣ ನಿಮ್ಮನ್ನು ಜನ ನಂಬುವುದಿಲ್ಲ. ವಾಸ್ತವ ಸ್ಥಿತಿ ಅರಿಯಬೇಕಾದರೆ ಮೊದಲು ಸಚಿವರು, ಶಾಸಕರು, ಅಧಿಕಾರಿಗಳು ಜನರ ಬಳಿಗೆ ಹೋಗಲಿ ಎಂದು ಒತ್ತಾಯಿಸಿದರು.  ಗೋಷ್ಠಿಯಲ್ಲಿ ಮುಖಂಡರಾದ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಸಂಸದರಾದ ಶೋಭ ಕರಂದ್ಲಾಜೆ, ಪಿ.ಸಿ.ಮೋಹನ್, ಶಾಸಕ ಅಶ್ವಥ್ ನಾರಾಯಣ್ ಸೇರಿದಂತೆ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin