‘ಮಠದಲ್ಲಿ ಇಫ್ತಾರ್‍ಕೂಟ ನಡೆಸಿದ ಪೇಜಾವರ ಶ್ರೀಗಳ ನಿರ್ಧಾರ ದೇಶಕ್ಕೆ ಮಾದರಿ’ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Udupi

ಬೆಂಗಳೂರು, ಜೂ.28- ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‍ಕೂಟ ನಡೆಸಿದ ಪೇಜಾವರ ಶ್ರೀಗಳ ನಿರ್ಧಾರ ದೇಶಕ್ಕೆ ಮಾದರಿಯಾಗುವಂತಹದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು. ಕುಮಾರಕೃಪಾದಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳ ನಡೆ ಪ್ರಶಂಸನೀಯವಾದದ್ದು, ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗುವ ಕ್ರಮ ಇದಾಗಿದೆ. ಈ ನಿರ್ಧಾರವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಮಹಾತ್ಮಗಾಂಧೀಜಿಯವರು ಇಂತಹ ನಡೆಯನ್ನೇ ಬಯಸಿದ್ದರು. ಶಾಂತಿ, ಸೌಹಾರ್ದತೆಗಾಗಿ ಶ್ರೀಗಳ ನಿರ್ಧಾರ ಸ್ವಾಗತಾರ್ಹ ಎಂದರು.
ಇಫ್ತಾರ್ ಕೂಟದ ಮೂಲಕ ಪೇಜಾವರ ಶ್ರೀಗಳು ಇಡೀ ರಾಜ್ಯದಲ್ಲಿ ಶಾಂತಿ ಕಾಪಾಡಲು ಮುನ್ನುಡಿ ಬರೆದಿದ್ದಾರೆ. ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಟೀಕೆ ಮಾಡುತ್ತಿರುವುದು ಸರಿಯಲ್ಲ. ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಸೌಹಾರ್ದತೆ ಇರಬಾರದೆಂಬ ಭಾವನೆ ಇದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಪೇಜಾವರ ಶ್ರೀಗಳ ಇಫ್ತಾರ್ ಕೂಟವನ್ನು ಸ್ವಾಗತಿಸಿ ಅಭಿನಂದಿಸುವುದಾಗಿ ಹೇಳಿದರು.
ಶ್ರೀಗಳು ವಿಶಾಲ ಚಿಂತನೆಗೆ ನಾಂದಿಹಾಡಿದ್ದಾರೆ. ಅಂತಹ ಪ್ರಯತ್ನಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೊಬ್ಬರ ಆಹಾರ ಕ್ರಮವನ್ನು ಪ್ರಶ್ನಿಸುವ ಹಕ್ಕು ಯಾರೊಬ್ಬರಿಗೂ ಇಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಭಕ್ಷ್ಯ ಮಾಡಿರುವುದನ್ನು ಟೀಕಿಸಿ ರಾಜಕೀಯ ಲಾಭ ಪಡೆಯಲು ಹವಣಿಸುವ ಬದಲು ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ದೇಶಾದ್ಯಂತ ಗೋಹತ್ಯೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಕನಿಷ್ಠ ಪಕ್ಷ ಬಿಜೆಪಿ ಆಡಳಿತ ಇರುವ ಗೋವಾದಲ್ಲಾದರೂ ಗೋ ಹತ್ಯೆ ನಿಷೇಧ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ ಅವರು, ಗೋಮಾಂಸ ತಿನ್ನಬೇಡಿ ಎಂದು ಹೇಳಲು ಯಡಿಯೂರಪ್ಪ ಯಾರು ಎಂದು ದಿನೇಶ್‍ಗುಂಡೂರಾವ್ ತಿರುಗೇಟು ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin