ಮತಗಟ್ಟೆಗೆ ತಲುಪಿದ ಸಿಬ್ಬಂದಿಗಳು, ಮತದಾನಕ್ಕೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

Voting-Bus--01
ಬೆಂಗಳೂರು,ಮೇ11- ದೇಶದ ಗಮನ ಸೆಳೆದಿರುವ ರಾಜ್ಯದ 15ನೇ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಘಟಾನುಘಟಿ ನಾಯಕರ ಹಣೆಬರಹವನ್ನು ಮತದಾರರು ನಾಳೆ ಬರೆಯಲಿದ್ದಾರೆ.  ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6.30ರವರೆಗೆ ರಾಜ್ಯದ ಒಟ್ಟು 223(ಜಯನಗರ ಹೊರತುಪಡಿಸಿ) ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕೆಲವು ಕಡೆ ಮಳೆಯಾಗಬಹುದೆಂಬ ಹಿನ್ನೆಲೆಯಲ್ಲಿ ಮತದಾನಕ್ಕೆ ಅರ್ಧಗಂಟೆ ಹೆಚ್ಚುವರಿ ಸಮಯ ಅವಕಾಶವನ್ನು ಆಯೋಗ ನೀಡಿದೆ.

2,52,05,820 ಪುರುಷ ಹಾಗೂ 2,23,15,727 ಮಹಿಳಾ ಮತದಾರರು, ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 5,12,24,351 ಮತದಾರರು ಮತ ಚಲಾಯಿ ಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ ಸೈನಿಕರು, ಅನಿವಾಸಿ ಭಾರತೀಯರಿಗೆ ಅಂಚೆ ಮೂಲಕ ಮತದಾನ ಮಾಡುವ ಅವಕಾಶವನ್ನು ಆಯೋಗ ಕಲ್ಪಿಸಿದೆ.  ರಾಜ್ಯಾದ್ಯಂತ 60 ಪಿಂಕ್ ಮತಗಟ್ಟೆ ಸೇರಿದಂತೆ ಒಟ್ಟಿ 58,808 ಮತಗಟ್ಟೆಗಳನ್ನು ತೆರೆಯಲಾಗಿದ್ದು 73,185 ನಿಯಂತ್ರಣ ಘಟಕಗಳು, 87,819 ಬ್ಯಾಲೆಟ್ ಘಟಕಗಳು, 1503 ಚೆಕ್‍ಪೋಸ್ಟ್ , 1361 ವಿಶೇಷ ಘಟಕಗಳನ್ನು ತೆರೆಯಲಾಗಿದೆ.

ಬಿಜೆಪಿ 223, ಕಾಂಗ್ರೆಸ್ 222, ಜೆಡಿಎಸ್ 201, ಬಿಎಸ್‍ಪಿ 18, ಸಿಪಿಐಎಂ 19, ಎನ್‍ಸಿಪಿ 14, ಪಕ್ಷೇತರರು 1155 ಸ್ಪರ್ಧಾ ಕಣದಲ್ಲಿದ್ದಾರೆ. ಇದರಲ್ಲಿ ಪುರುಷರು 2436 ಹಾಗೂ ಮಹಿಳೆ 219 ಸೇರಿದಂತೆ ಒಟ್ಟು ಕಣದಲ್ಲಿ 2655 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.  ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ರಾಜ್ಯಾದ್ಯಂತ ಸಿಆರ್‍ಪಿಎಫ್, ಬಿಎಸ್‍ಎಫ್, ಕೆಎಸ್‍ಆರ್‍ಪಿ, ಆರ್‍ಎಎಫ್ ಸೇರಿದಂತೆ 56,696 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದರಲ್ಲಿ ರಾಮನಗರ, ಕನಕಪುರ, ಶಿಕಾರಿಪುರ, ಮೊಳಕಾಲ್ಮೂರು, ಬಾದಾಮಿ, ಬೆಳಗಾವಿ ಗ್ರಾಮಾಂತರ, ಗೋವಿಂದರಾಜನಗರ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕ್ಷೇತ್ರಗಳೆಂದು ಘೋಷಣೆ ಮಾಡಲಾಗಿದೆ. ಈ ಕ್ಷೇತ್ರಗಳಿಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.
ನಕ್ಸಲ್ ಪೀಡಿತ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಮಲೆನಾಡಿನ ಭಾಗಗಳಲ್ಲಿ ವಿಶೇಷ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಮತದಾನಕ್ಕೆ ಅಡ್ಡಿ ಪಡಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ರೀತಿಯ ಬಿಗಿಯಾದ ಕ್ರಮಗಳನ್ನು ಕೈಗೊಂಡಿದೆ. ಯಾರಾದರೂ ಮತದಾರರ ಮೇಲೆ ಪ್ರಭಾವ ಬೀರಿದರೆ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಯುವಕರೇ ಟಾರ್ಗೆಟ್:

ಈ ಬಾರಿಯ ಚುನಾವಣೆಯಲ್ಲಿ 18ರಿಂದ 30 ವರ್ಷದೊಳಗಿನ ಸುಮಾರು 30 ಲಕ್ಷಕ್ಕೂ ಹೆಚ್ಚು ಯುವ ಮತದಾ ರರು ಪ್ರಮುಖ ಪಕ್ಷಗಳ ಟಾರ್ಗೆಟ್ ಆಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮತ್ತಿತರ ಪಕ್ಷಗಳು ಈ ಯುವಕರನ್ನೇ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ.
ಘಟಾನುಘಟಿ ನಾಯಕರ ಹಣೆಬರಹ ನಿರ್ಧಾರ: ನಾಳೆ ನಡೆಯಲಿರುವ ಮತದಾನದಲ್ಲಿ ಪ್ರಮುಖ ಮೂರು ಪಕ್ಷಗಳು ಸೇರಿದಂತೆ ಅನೇಕ ನಾಯಕರ ಹಣೆಬರಹವನ್ನು ಮತದಾರರ ಬರೆಯಲಿದ್ದಾನೆ. ಬಹುತೇಕ ಕೊನೆಯ ಚುನಾವಣೆಯ ಹೊಸ್ತಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಇದು ಕೊನೆಯ ಚುನಾವಣೆಯಾಗಲಿದೆ. ಇನ್ನು ಕಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್(ಹುಬ್ಬಳ್ಳಿ-ಧಾರವಾಡ ಕೇಂದ್ರ), ಎಚ್.ಡಿ.ಕುಮಾರಸ್ವಾಮಿ (ರಾಮನಗರ -ಚನ್ನಪಟ್ಟಣ) ಕಣದಲ್ಲಿರುವ ಪ್ರಮುಖರು.

ಇದೇ ರೀತಿ ಸಚಿವರಾದ ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್), ಡಿ.ಕೆ.ಶಿವಕುಮಾರ್(ಕನಕಪುರ), ಕೆ.ಜೆ.ಜಾರ್ಜ್ (ಸರ್ವಜ್ಞ ನಗರ), ಎಚ್.ಸಿ.ಮಹದೇವಪ್ಪ (ತೀನರಸೀಪುರ), ಎಂ.ಕೃಷ್ಣಪ್ಪ(ವಿಜಯನಗರ), ಟಿ.ಬಿ.ಜಯಚಂದ್ರ(ಶಿರಾ), ಎಚ್.ಆಂಜನೇಯ(ಹೊಳಲ್ಕೆರೆ), ಎಂ.ಬಿ.ಪಾಟೀಲ್ (ಬಬಲೇಶ್ವರ), ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್(ಕೊರಟಗೆರೆ), ಶ್ರೀರಾಮುಲು( ಬಾದಾಮಿ-ಮೊಳಕಾಲ್ಮೂರು), ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ), ಶಾಮನೂರು ಶಿವಶಂಕರಪ್ಪ(ದಾವಣಗೆರೆ ಉತ್ತರ) ಸೇರಿದಂತೆ ಅನೇಕ ನಾಯಕರ ಭವಿಷ್ಯ ನಾಳೆ ಮತ ಪೆಟ್ಟಿಗೆಯಲ್ಲಿ ತೀರ್ಮಾನವಾಗಲಿದೆ.

ಅಲ್ಲದೆ ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ವಿ.ಸೋಮಣ್ಣ , ಎಂ.ಪಿ. ರೇಣುಕಾ ಚಾರ್ಯ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್, ಎ.ರಾಮದಾಸ್, ಅಪ್ಪಚ್ಚು ರಂಜನ್ ಮತ್ತಿತರರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಪ್ರಮುಖವಾಗಿ ಈ ಚುನಾವಣೆಯಲ್ಲಿ ರಾಜ್ಯದಲ್ಲೇ ಅತ್ಯಂತ ಹೈವೋಲ್ಟೇಜ್ ಕ್ಷೇತ್ರಗಳೆನಿಸಿರುವ ಚಾಮುಂಡೇಶ್ವರಿ, ರಾಮನಗರ, ಶಿಕಾರಿಪುರ, ಮೊಳಕಾಲ್ಮೂರು, ಬಾದಾಮಿ ಕ್ಷೇತ್ರಗಳಲ್ಲಿ ಮತದಾರನ ಚಿತ್ತ ಯಾರತ್ತ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.

ಉಳಿದಂತೆ ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ಅಧಿ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಮತ ಪ್ರಚಾರ ನಡೆಸಿದ್ದರು.
ಮತದಾರ ಯಾರ ಕೈ ಹಿಡಿಲಿದ್ದಾರೆ ಎಂಬುದು ಮೇ 15ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ನಿರ್ಧಾರವಾಗಲಿದೆ.  ಮತಗಟ್ಟೆ ಕಡೆಗೆ:ಚುನಾವಣಾ ಸಿಬ್ಬಂದಿ ಇಂದು ಮತದಾರರ ಪಟ್ಟಿ, ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‍ಗಳೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು. ಇದಕ್ಕೂ ಮುನ್ನ ನಿಯೋಜಿತ ಸಿಬ್ಬಂದಿ ಪೋಸ್ಟಲ್ ಬ್ಯಾಲೆಟ್ ಮೂಲಕ ತಮ್ಮ ಹಕ್ಕು ಚಲಾಯಿಸಿ ಮತಗಟ್ಟೆಗಳಿಗೆ ತೆರಳಿದರು.

ನಾಳೆ ಬೆಳಗ್ಗೆ 7 ರಿಂದ ಸಂಜೆ 6.30 ರವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗ ಲಿರುವುದರಿಂದ ನಿಯೋಜಿತ ಸಿಬ್ಬಂದಿ ಇಂದು ಸಂಜೆಯೇ ಮತಗಟ್ಟೆಗಳಿಗೆ ತೆರಳಿ ಅಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.  ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಸಮಾವೇಶಗೊಂಡ ಸಿಬ್ಬಂದಿ ಚುನಾ ವಣಾಧಿಕಾರಿಗಳಿಂದ ಪಡೆದ ಸಂಪೂರ್ಣ ಮಾಹಿತಿ ಹಾಗೂ ಮತಯಂತ್ರ ಮತ್ತಿತರ ಪರಿಕರ ಗಳೊಂದಿಗೆ ಬಸ್‍ಗಳ ಮೂಲಕ ಮತಗಟ್ಟೆಗೆ ತೆರಳಿ ನಾಳಿನ ಮತದಾನ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಮಾಡಿಕೊಂಡರು.

ಇಂದು ಬೆಳಗ್ಗೆಯೇ ಪ್ರತಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಚುನಾವಣಾ ಅಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ಮತಯಂತ್ರ ಹಾಗೂ ಮತದಾನಕ್ಕೆ ಬೇಕಾದ ಸಾಮಗ್ರಿ ಗಳನ್ನು ಹಂಚಿಕೆ ಮಾಡಿದರು. ಮತಗಟ್ಟೆ ಸಿಬ್ಬಂದಿ ಮತಯಂತ್ರದೊಂದಿಗೆ ತೆರಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.  ಮತಗಟ್ಟೆ ವ್ಯಾಪ್ತಿಯ ನೂರು ಮೀಟರ್ ಒಳಗೆ ಮತಯಾಚನೆ ನಿರ್ಬಂಧಿಸುವ ಪಟ್ಟೆ(ಗುರುತು)ಯನ್ನು ಎಲ್ಲಾ ಮತಗಟ್ಟೆಗಳಲ್ಲಿ ಇಂದೇ ಹಾಕಲಾಗಿತ್ತು. ಈ ಹಿಂದೆ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು.

ಆದರೆ ಈ ಬಾರಿ ಕ್ರಿಟಿಕಲ್ ಪೋಲಿಂಗ್ ಸ್ಟೇಷನ್ ಮತ್ತು ನಾರ್ಮಲ್ ಪೋಲಿಂಗ್ ಸ್ಟೇಷನ್ ಎಂದು ವಿಂಗಡಿಸಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ನಿಯೋಜನೆಗೊಂಡ ಭದ್ರತಾ ಸಿಬ್ಬಂದಿ ಇಂದೇ ಮತಗಟ್ಟೆಗೆ ತೆರಳಿ ಭದ್ರತೆಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡರು. ರಾಜಧಾನಿ ಬೆಂಗಳೂರಿನಲ್ಲಿ 1595, ಬೆಳಗಾವಿ 891, ಮೈಸೂರು 632, ತುಮಕೂರು 528, ದಕ್ಷಿಣ ಕನ್ನಡ 483 ಸೇರಿದಂತೆ ರಾಜ್ಯದಲ್ಲಿ 12,002 ಕ್ರಿಟಿಕಲ್ ಪೋಲಿಂಗ್ ಸ್ಟೇಷನ್‍ಗಳೆಂದು ಗುರುತಿಸಲಾಗಿದ್ದು, ಇವುಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.  ಮತಗಟ್ಟೆಯ 100 ಮೀಟರ್ ಸುತ್ತಳತೆಯಲ್ಲಿ ಯಾವುದೇ ಪ್ರಚಾರ ಮಾಡುವಂತಿಲ್ಲ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin