ಮುಗಿಯಿತು ಮುಷ್ಕರ । ಕರ್ತವ್ಯಕ್ಕೆ ಮರಳಿದ ವೈದ್ಯರು । ನಿಟ್ಟುಸಿರುಬಿಟ್ಟ ರೋಗಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Doctors--01

ಬೆಂಗಳೂರು, ನ.18- ಕಳೆದ ಐದು ದಿನಗಳಿಂದ ಮುಷ್ಕರ ನಿರತರಾಗಿದ್ದ ಖಾಸಗಿ ಆಸ್ಪತ್ರೆ ವೈದ್ಯರು ಕರ್ತವ್ಯಕ್ಕೆ ಹಾಜರಾದರು. ಸರ್ಕಾರ ಹಾಗೂ ಖಾಸಗಿ ವೈದ್ಯರ ನಡುವೆ ನಡೆದ ಮಾತುಕತೆ ಫಲಪ್ರದವಾದ ಕಾರಣ ಮುಷ್ಕರ ಹಿಂಪಡೆದ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ರೋಗಿಗಳ ಪರದಾಟ ತಪ್ಪಿದಂತಾಯಿತು.

ಕಳೆದ ಐದು ದಿನಗಳಿಂದ ವೈದ್ಯರು ಮುಷ್ಕರ ನಡೆಸಿದ್ದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವುದು ಕೇಳಿಬಂದಿತ್ತು. ಸದ್ಯ ಈಗ ಆ ಆತಂಕ ದೂರವಾದಂತಾಗಿದೆ. ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳ ಒಪಿಡಿ, ತುರ್ತು ನಿಗಾ ಘಟಕ, ಡಯಾಲಿಸಿಸ್ ಕೇಂದ್ರ, ಎಂಆರ್‍ಐ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳ ವಿಭಾಗಗಳು ಇಂದಿನಿಂದ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದವು.  ಸುಮಾರು 600ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು, 6000 ನರ್ಸಿಂಗ್ ಹೋಂಗಳು, 25,000 ಖಾಸಗಿ ವೈದ್ಯರು ಏಕಕಾಲದಲ್ಲಿ ಪ್ರತಿಭಟನೆಗಿಳಿದಿದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಅಯೋಮಯವಾಗಿತ್ತು. ತಾಲೂಕು, ಜಿಲ್ಲಾ ಹಾಗೂ ಮಹಾನಗರಗಳಲ್ಲಿ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಆತಂಕಕ್ಕೊಳಗಾಗಿದ್ದರು.

ಈ ಆತಂಕ ದೂರವಾಗಿದ್ದು, ಖಾಸಗಿ ಆಸ್ಪತ್ರೆಗಳು ಇಂದಿನಿಂದ ಎಂದಿನಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಐದು ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದ ಬಳಿ ಮುಷ್ಕರ ನಡೆಸಿದರು.  ಮುಷ್ಕರ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಹೈಕೋರ್ಟ್ ಮುಷ್ಕರವನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಖಡಕ್ ಸೂಚನೆ ಕೂಡ ನೀಡಿತ್ತು. ಈ ನಡುವೆ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಕೂಡ ಬಗೆಹರಿದು ಎಲ್ಲ ವೈದ್ಯರು ಇಂದಿನಿಂದ ಕರ್ತವ್ಯಕ್ಕೆ ಹಾಜರಾದರು. ವೈದ್ಯರ ಮುಷ್ಕರ ತಾರ್ಕಿಕ ಅಂತ್ಯ ಕಂಡಂತಾದರೂ ಮುಷ್ಕರದ ಸಂದರ್ಭದಲ್ಲಿ ಹತ್ತಾರು ಜೀವಗಳು ಬಲಿಯಾದವು. ಇದಕ್ಕೆ ಬೆಲೆ ತೆರುವವರ್ಯಾರು..!?

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin