ಮೇಲ್ಮನೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಯಿತು ‘ಪ್ಲೀಸ್ ಸಿಟ್‍ಡೌನ್’ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Session-Vidhanaparishat--01

ಬೆಂಗಳೂರು, ಜು.3- ಮೇಲ್ಮನೆ ಕಲಾಪದಲ್ಲಿ ಕಾಂಗ್ರೆಸ್‍ನ ಶರಣಪ್ಪ ಮಟ್ಟೂರು ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ನೀವು ಕುಳಿತುಕೊಳ್ಳಿ ಎಂದು ಹೇಳಿದ ವಿಷಯ ಮಾತಿನ ಚಕಮಕಿಗೆ ಕಾರಣವಾಯಿತು.  ಸಣ್ಣ ನೀರಾವರಿ ಇಲಾಖೆಯಲ್ಲಿ ಕೊಪ್ಪಳದಲ್ಲಿ ಸುಮಾರು 38 ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಶರಣಪ್ಪ ಮಟ್ಟೂರು ಅವರು ಸಚಿವ ಸಿ.ಎಸ್.ಪುಟ್ಟರಾಜು ಗಮನಕ್ಕೆ ತಂದಾಗ ಪ್ರತಿ ಪಕ್ಷದ ಸದಸ್ಯರಾದ ರಘುನಾಥ್ ಮಲ್ಕಾಪುರೆ, ಕೆ.ಬಿ.ಶಾಣಪ್ಪ ಮತ್ತಿತರರು ಈ ವಿಷಯ ಗಂಭೀರವಾಗಿದೆ. ಆಡಳಿತ ಪಕ್ಷದ ಸದಸ್ಯರೇ ಆರೋಪ ಮಾಡುತ್ತಿದ್ದಾರೆ ಎಂದರು.

ಹೌದು. ನಾನೇ ಆರೋಪ ಮಾಡುತ್ತಿದ್ದೇನೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ನನಗೆ ಮಾತನಾಡಲು ಅವಕಾಶಕೊಡಿ ಎಂದು ಮಟ್ಟೂರು ಹೇಳಿದರು. ನೀವು ಆಡಳಿತದಲ್ಲಿದ್ದೀರಾ, ನಿಮ್ಮ ಆರೋಪ ಗಂಭೀರವಾಗಿದೆ ಎಂದು ವೈ.ಎ.ನಾರಾಯಣಸ್ವಾಮಿ ಮತ್ತು ಪ್ರತಿ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮತ್ತೊಮ್ಮೆ ಹೇಳಿದಾಗ ಸಿಟ್ಟಾದ ಮಟ್ಟೂರು ಹೌದು, ನಾನೇ ಹೇಳುತ್ತಿದ್ದೇನೆ ಎಂದು ರೇಗಿ ನೀವು ಕುಳಿತುಕೊಳ್ಳಿ ಎಂದು ಸಿಟ್ಟಾದರು.

ಆಗ ಬಿಜೆಪಿ ಸದಸ್ಯರು ಮಟ್ಟೂರು ವಿರುದ್ಧ ಹರಿಹಾಯ್ದರು. ಸದನವನ್ನು ಸದಸ್ಯರಾದ ಮಟ್ಟೂರು ನಿಯಂತ್ರಿಸುವುದೋ ಅಥವಾ ಪೀಠಾಧಿಪತಿಗಳು ನಿಯಂತ್ರಿಸುವುದೋ, ನೀವು ನಮ್ಮ ರಕ್ಷಣೆಗೆ ಬರಬೇಕೆಂದು ಸಭಾಪತಿಗಳಿಗೆ ಮನವಿ ಮಾಡಿದರು. ಸದಸ್ಯ ರಘುನಾಥ್ ಮಲ್ಕಾಪುರೆ ಮಾತನಾಡಿ, ಮಟ್ಟೂರು ಹೇಳಿಕೆಯನ್ನು ಕಡತದಿಂದ ತೆಗೆಸಬೇಕೆಂದು ಆಗ್ರಹಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಸಮಜಾಯಿಷಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin