ಯುವತಿಯನ್ನು ಅಪಹರಿಸಿ ಅತ್ಯಾಚಾರಕ್ಕೆತ್ನಿಸಿದ ಕಾಮುಕ ಆಟೋ ಚಾಲಕರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Auto-Rape--01

ಬೆಂಗಳೂರು,ಆ.11-ಸೋದರ ಸಂಬಂಧಿ ಜೊತೆ ಸಂಬಂಧಿಕರ ಮನೆಗೆ ಬಂದು ಅವರು ಸಿಗದ ಕಾರಣ ವಾಪಸ್ ಊರಿಗೆ ಹೋಗಲು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಚಿತ್ರದುರ್ಗದ ಯುವತಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಆಟೋ ಚಾಲಕರನ್ನು ಯಶವಂತಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಶವಂತಪುರದ ಬಿ.ಕೆ.ನಗರದ ಫಯಾಜ್(30) ಮತ್ತು ಜುಬೇರ್ ಖಾನ್ (25) ಬಂಧಿತ ಆಟೋ ಚಾಲಕರು. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಯಶವಂತಪುರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಚಿತ್ರದುರ್ಗದಿಂದ ನಿನ್ನೆ ಬೆಂಗಳೂರಿಗೆ ಬಂದಿದ್ದ 19 ವರ್ಷದ ಯುವತಿ ಸೋದರ ಸಂಬಂಧಿ ಜೊತೆ ನೆಂಟರೊಬ್ಬರ ಮನೆಗೆ ಹೋಗಿದ್ದು, ಅವರು ಸಿಗದ ಕಾರಣ ತಮ್ಮ ಊರಿಗೆ ವಾಪಸ್ಸಾಗಲು ಸಂಜೆ 4 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಚಿತ್ರದುರ್ಗಕ್ಕೆ ರಾತ್ರಿ 12 ಗಂಟೆಗೆ ರೈಲು ಇರುವುದಾಗಿ ತಿಳಿಸಿದ್ದು ರೈಲಿಗೆ ಹೋಗಲು ಹಣ ಇಲ್ಲದೆ ನಿಲ್ದಾಣದಲ್ಲೇ ಕುಳಿತಿದ್ದಾಗ ಇವರ ಬಳಿ ಬಂದ ಮೂವರು ದುಷ್ಕರ್ಮಿಗಳ ಪೈಕಿ ಒಬ್ಬಾತ ಯುವತಿ ಜೊತೆಯಲ್ಲಿದ್ದ ಸೋದರ ಸಂಬಂಧಿಯನ್ನು ಸ್ವಲ್ಪ ದೂರ ಕರೆದೊಯ್ದು ಆತನಿಗೆ ಹೊಡೆದು ಬೇರೆಡೆಗೆ ಎಳೆದುಕೊಂಡು ಹೋಗಿದ್ದಾನೆ.

ಇತ್ತ ಆರೋಪಿ ಫಯಾಜ್ ಬಲವಂತವಾಗಿ ಯುವತಿಯನ್ನು ಅಂಗಡಿಯೊಂದರ ಬಳಿ ಕರೆದೊಯ್ದು , ಬಾಗಿಲನ್ನು ಹಾಕಿಕೊಂಡು ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಸಹಾಯಕ್ಕಾಗಿ ಯುವತಿ ಚೀರಿಕೊಂಡಿದ್ದಾಳೆ. ಅದೇ ಸಮಯಕ್ಕೆ ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಆಟೋ ಚಾಲಕ ಅಸ್ಗರ್ ಪಾಷ ಎಂಬುವರ ನೆರವಿನಿಂದ ಹಲ್ಲೆಗೊಳಗಾದ ಸೋದರ ಸಂಬಂಧಿ ಯಶವಂತಪುರ ಠಾಣೆಗೆ ಹೋಗಿ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದ ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದ ಎಎಸ್‍ಐ ರಾಜಣ್ಣ, ಹೋಂಗಾರ್ಡ್ ಶ್ರೀನಿವಾಸ್ ಅವರು ಆಟೋ ಚಾಲಕ ಅಸ್ಗರ್ ಪಾಷನನ್ನು ಜೊತೆಯಲ್ಲಿ ಕರೆದುಕೊಂಡು ಹುಡುಕಲು ಆರಂಭಿಸಿ ಕೊನೆಗೂ ಯುವತಿಯನ್ನು ರಕ್ಷಿಸಿ ಆರೋಪಿ ಫಯಾಜ್‍ನನ್ನು ಬಂಧಿಸಿದ್ದಾರೆ.

ರಾತ್ರಿ ಗಸ್ತಿನಲ್ಲಿದ್ದ ಇನ್‍ಸ್ಪೆಕ್ಟರ್ ಮುದ್ದರಾಜು ಅವರು ಆಟೋ ಚಾಲಕ ಅಸ್ಗರ್ ಪಾಷನನ್ನು ಜೊತೆಯಲ್ಲಿ ಕರೆದೊಯ್ದು ಸಿಬ್ಬಂದಿಗಳೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮತ್ತೊಬ್ಬ ಆರೋಪಿ ಜುಬೇರ್ ಖಾನ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ನಗರ ಪೊಲೀಸ್ ಆಯುಕ್ತರು ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು ಇವರ ಕಾರ್ಯವನ್ನು ಪ್ರಶಂಸಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin