ಯೋಗ್ಯ ಅಭ್ಯರ್ಥಿ ಆಯ್ಕೆ ಹೊಣೆ ನಿಮ್ಮದೇ…ತಪ್ಪದೆ ಮತದಾನ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

vote
ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಾಯುವವರೆಗು ವಿದ್ಯೆ, ಉದ್ಯಮ, ರಾಜಕೀಯ ಮುನ್ನಡೆಗಾಗಿ ದೇಶ ಭಕ್ತಿಯುಳ್ಳ ರಾಜಕಾರಣಿ ದುಡಿಯಬೇಕು ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಹೇಳಿದ್ದರು. ರಾಜಕಾರಣ ಎಲ್ಲಕ್ಕಿಂತ ಶ್ರೇಷ್ಠ ವಿಜಾ್ಞನ ಎಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಬಣ್ಣಿಸಿದ್ದರು. ಸ್ವಾತಂತ್ರ್ಯದ ಮೊದಲ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ದುಡಿಯುವುದೆಂದರೆ ಮನೆ ಮಠ ಬಿಟ್ಟು ಹೋಗಬೇಕಿತ್ತು. ಈಗ ರಾಜಕೀಯಕ್ಕೆ ಹೋದರೆ ಬಂಗಲೆಗಳನ್ನೇ ಕಟ್ಟಬಹುದು ಎನ್ನುವಂತಾಗಿದೆ.

ರಾಜಕಾರಣ ಪುರಾತನ ಕಾಲದಿಂದಲೂ ಅತೀ ಉತ್ಕøಷ್ಟ ಸ್ಥಾನ ಹೊಂದಿದೆ. ದೇಶದ ಅಭಿವೃದ್ಧಿ, ಸ್ಥಿರತೆ, ಶಾಂತಿ ಹಾಗೂ ಸಾಮಾಜಿಕ ನೆಮ್ಮದಿ ರಾಜಕಾರಣದಲ್ಲಿ ಅತೀ ಮಹತ್ವದ ವಿಷಯಗಳಾಗಿವೆ. ರಾಜಕೀಯಕ್ಕೆ ಇರುವ ಈ ಮಹತ್ವವೇ ಉತ್ತಮ ರಾಜಕಾರಣಿಗಳ ಅವಶ್ಯಕತೆಯನ್ನು ಎತ್ತಿ ತೋರಿಸುತ್ತದೆ. ಉತ್ತಮ ರಾಜಕಾರಣಿಗಳು ದೇಶದ ಮತ್ತು ರಾಜ್ಯದ ಘನತೆ, ಅಭಿಮಾನ ಹಾಗೂ ಗೌರವವನ್ನು ಕಾಪಾಡುತ್ತಾರೆ ಹಾಗೂ ದೇಶದ ವರ್ಚಸ್ಸನ್ನು ವೃದ್ದಿಸುವಲ್ಲಿ ತೊಡಗುತ್ತಾರೆ. ಇದೇ ಕಾರಣಕ್ಕಾಗಿಯೇ ರಾಜಕಾರಣಿಗೆ ಅಷ್ಟೊಂದು ಮಹತ್ವ ಇರುತ್ತದೆ.

ಉತ್ತಮ ರಾಜಕಾರಣಿಗಳು ತಮ್ಮ ಸಾಮಥ್ರ್ಯದಿಂದ ಪಕ್ಷವನ್ನು ಬಲಿಷ್ಠವಾಗಿ ಪರಿವರ್ತಿಸಿ ರಾಜ್ಯದ ಮತ್ತು ರಾಷ್ಟ್ರದ ಆಡಳಿತವನ್ನು ಯೋಗ್ಯ ಮತ್ತು ಸಮರ್ಥ ರೀತಿಯಲ್ಲಿ ನಡೆಸಬಹುದಾಗಿದೆ. ಯಾವುದೇ ಪಕ್ಷದಲ್ಲಿ ಯೋಗ್ಯ ಧುರೀಣರೂ, ಪ್ರತಿನಿಧಿಗಳೂ, ವಕ್ತಾರರೂ ಇರಬೇಕಾಗುತ್ತದೆ. ಆಗ ಮಾತ್ರ ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ಕ್ಷೇತ್ರದಲ್ಲೂ ಜನರು ಪ್ರಗತಿ, ಅಭಿವೃದ್ದಿ, ಸ್ಥಿರತೆ ಹಾಗೂ ನೆಮ್ಮದಿಯನ್ನು ಅನುಭವಿಸಬಹುದಾಗಿದೆ.  ಇಂತಹ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಇವತ್ತು ನಮ್ಮ ದೇಶಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಅವಶ್ಯವಾಗಿದೆ. ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಒಳ್ಳೆಯ ಪಕ್ಷ ಹಾಗೂ ಅದಕ್ಕೆ ತಕ್ಕಂತೆ ಒಳ್ಳೆಯ ಪ್ರತಿನಿಧಿಯನ್ನು ಆರಿಸುವುದು ಪ್ರತಿಯೊಬ್ಬ ಪ್ರಜೆಯ ಕೈಯಲ್ಲಿದೆ. ಹಾಗಾದರೆ ಯಾವುದು ಒಳ್ಳೆಯ ಪಕ್ಷ..? ಯಾರು ಉತ್ತಮ ರಾಜಕಾರಣಿ..? ಯೋಗ್ಯ ಪ್ರತಿನಿಧಿಯನ್ನು ಗುರುತಿಸುವುದು ಹೇಗೆ..? ಮುಂತಾದ ಪ್ರಶ್ನೆಗಳು ಉದ್ಭವಿಸುವುದು ಸಹಜ. ಪ್ರಜಾ್ಞವಂತ ಮತದಾರರು ಆಲೋಚಿಸಿ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ನಮ್ಮ ಮತವೇನಿದ್ದರೂ ದಕ್ಷ, ನಿಷ್ಠಾವಂತ ಅಭ್ಯರ್ಥಿಗೆ, ಭ್ರಷ್ಟರಿಗಲ್ಲ ಎಂಬ ನಿರ್ಧಾರಕ್ಕೆ ಬರಬೇಕು.
ನಮ್ಮ ದೇಶದಲ್ಲಿ ಇವತ್ತು ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದೆ. ಏರುತ್ತಿರುವ ಜನಸಂಖ್ಯೆ, ನಿರುದ್ಯೋಗ, ಹಳ್ಳಿಗಳಲ್ಲಿನ ಬಡತನ, ದಾರಿದ್ರ್ಯ, ಗ್ರಾಮಗಳನ್ನು ತ್ಯಜಿಸಿ ಪಟ್ಟಣ-ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಜನರು, ಇದರಿಂದಾಗಿ ನಗರಗಳಲ್ಲಿ ಉದ್ಭವಿಸುತ್ತಿರುವ ಕೊಳಗೇರಿಗಳು, ದಿಢೀರ್ ಶ್ರೀಮಂತರಾಗುತ್ತಿರುವ ಭೂಗಳ್ಳರು, ಮಧ್ಯವರ್ತಿಗಳು, ಅವರಿಗೆ ಆಶ್ರಯ ನೀಡುತ್ತಿರುವ ಕೆಲವು ರಾಜಕಾರಣಿಗಳು, ಅಧಿಕಾರ ವರ್ಗದವರು, ಹೀಗೆ ಅನೇಕ ರೀತಿಯಲ್ಲಿ ನಮ್ಮ ಸಮಾಜದ ಸಮಸ್ಯೆಗಳು ದ್ವಿಗುಣಗೊಳ್ಳುತ್ತಿವೆ.

ನಮ್ಮ ಆರ್ಥಿಕ ಮತ್ತು ಔದ್ಯಮಿಕ ಧೋರಣೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುತ್ತಿವೆಯೆ ಅಥವಾ ಶ್ರೀಮಂತರನ್ನು ಇನ್ನೂ ಶ್ರೀಮಂತರನ್ನಾಗಿಸಿ ಬಡವರ ಬವಣೆಯನ್ನು ಹೆಚ್ಚಾಗಿಸುತ್ತಿವೆಯೆ ಎಂಬ ಬಗ್ಗೆ ಕಿಂಚಿತ್ತೂ ಯೋಚಿಸುವ ಗೊಡವೆಗೇ ಹೋಗದ ನಮ್ಮ ರಾಜಕಾರಣಿಗಳು ಈ ದೇಶದ ಒಟ್ಟಾರೆ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು.  ಇವತ್ತಿನ ಬದಲಾಗುತ್ತಿರುವ ನಮ್ಮ ಆಧುನಿಕ ಯುಗದಲ್ಲಿ ನಮ್ಮ ದೇಶದ ಸಮಸ್ಯೆಗಳನ್ನು ತಿಳಿಯುವ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ದೇಶ ಮತ್ತು ರಾಜ್ಯ ಯಾವ ರೀತಿಯಲ್ಲಿ ಮುಂದೆ ಹೋದರೆ ಭವಿಷ್ಯ ಉಜ್ವಲವಾಗಬಹುದು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಬೇಕಿದೆ. ಇವೆಲ್ಲವನ್ನೂ ತಿಳಿದುಕೊಳ್ಳುವ ಮತ್ತು ಗ್ರಹಿಸುವ ಜವಾಬ್ದಾರಿಯುತ ರಾಜಕೀಯ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಮತ್ತು ನಮ್ಮ ರಾಷ್ಟ್ರಕ್ಕೆ ಅಗತ್ಯವಾಗಿ ಬೇಕಾಗಿದೆ. ಆದರೆ, ಇದರ ಕೊರತೆಯೇ ನಮ್ಮ ದೊಡ್ಡ ಸಮಸ್ಯೆಯಾಗಿದೆ.

ನಾವು 21ನೇ ಶತಮಾನದಲ್ಲಿದ್ದೇವೆ. ಇದು ವಿಜಾ್ಞನ ಮತ್ತು ತಂತ್ರಜಾ್ಞನದಿಂದ ಪರಿವರ್ತನೆಗೊಳ್ಳುತ್ತಿರುವ ಆಧುನಿಕ ಯುಗ. ಇಲ್ಲಿ ಯುವ ಜನಾಂಗದ ಪಾತ್ರ ಮಹತ್ವವಾದುದು. ಜಾತಿ, ಧರ್ಮ, ವಂಶಾವಳಿ ಪಿಡುಗಿನಿಂದ ದೂರವಿರಲು ಬಯಸುತ್ತಿರುವ ಯುವ ಪೀಳಿಗೆ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಖಂಡಿತವಾಗಿಯೂ ಇಷ್ಟ ಪಡುವುದಿಲ್ಲ. ಕೆಲ ಯುವಕರು ರಾಜಕಾರಣಿಗಳನ್ನು ಕಂಡರೆ ಅಸಹ್ಯ ಪಡುತ್ತಾರೆ.  ಇವತ್ತು ನಮಗೆ ಬುದ್ಧಿವಂತ, ಪ್ರಜ್ಞಾವಂತ ರಾಜಕಾರಣಿಗಳು, ಬದಲಾಗುತ್ತಿರುವ ಸಮಾಜದಲ್ಲಿನ ಹೊಸ ತಿರುವುಗಳನ್ನು ಅರ್ಥ ಮಾಡಿಕೊಳ್ಳುವ ರಾಜಕಾರಣಿಗಳು ಬೇಕಾಗಿದ್ದಾರೆ. ಮಹತ್ವದ ವಿಷಯಗಳಾದ ಪರಿಸರ, ಜಾಗತೀಕರಣ ಹಾಗೂ ಆರ್ಥಿಕ ಮತ್ತು ವೈಜಾ್ಞನಿಕ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆ, ಪ್ರಗತಿ ಇವೆಲ್ಲವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮತ್ತು ಕುತೂಹಲವಿರುವ ರಾಜಕೀಯ ನೇತಾರರು ನಮ್ಮ ಸಮಾಜಕ್ಕೆ ಅವಶ್ಯವಾಗಿದ್ದಾರೆ.

ಈ ಪ್ರಜ್ಞಾವಂತ ರಾಜಕಾರಣಿಗಳಿಂದ ಒಂದು ಹೊಸ ಮತ್ತು ಆಧುನಿಕ ರಾಜಕೀಯ ವ್ಯವಸ್ಥೆ ಬರಲು ಸಾಧ್ಯವಾದೀತು. ಇಂಥ ರಾಜಕೀಯ ವ್ಯವಸ್ಥೆ ನಮ್ಮ ಯುವ ಜನರ ಕನಸುಗಳನ್ನು ನನಸಾಗಿಸಬಹುದು. ನಿಜವಾದ ಪ್ರಗತಿಯನ್ನು ಸಾಧಿಸಲು ಉತ್ತೇಜನ ನೀಡಬಲ್ಲದು ಹಾಗೂ ಇತರ ಪ್ರಗತಿಪರ ರಾಷ್ಟ್ರಗಳ ಮಟ್ಟದಲ್ಲಿ ಸರಿಸಾಟಿಯಾಗಿ ನಿಲ್ಲಲ್ಲು ಸಹಕಾರಿಯಾಗಬಲ್ಲದು.  ಇವೆಲ್ಲವೂ ಸಾಧ್ಯವಾಗಬೇಕಾದರೆ ನಮ್ಮ ಮತದಾರ ಇವತ್ತು ತನ್ನ ಮನಸ್ಸು ಮತ್ತು ದೃಷ್ಟಿಕೋನ ಬದಲಿಸಬೇಕು. ಜಾತಿ, ಧರ್ಮ, ವಂಶ ಮತ್ತು ಹಣ-ಹೆಂಡದ ಪ್ರಭಾವದಿಂದ ದೂರ ಸರಿದು ಸಮಾಜದ ಏಳಿಗೆಯ ಕಡೆಗೆ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ಮತವನ್ನು ಚಲಾಯಿಸಿದಾಗ ಮಾತ್ರ ಹೊಸ ಯುಗದ ರಾಜಕಾರಣಕ್ಕೆ ನಾಂದಿ ಹಾಡಬಲ್ಲದು.  ಈಗ ನಮ್ಮ ಎದುರಿಗೆ ಇಂತಹ ಒಂದು ಕಾಲ ಬಂದು ನಿಂತಿದೆ. ಆದ್ದರಿಂದ ನಾವು ತುಂಬಾ ಜಾಗರೂಕತೆಯಿಂದ, ಚಾಣಾಕ್ಷತನದಿಂದ ನಮ್ಮ ನಿರ್ಧಾರವನ್ನು ಕೈಗೊಳ್ಳಬೇಕಿದೆ. ನಮ್ಮ ಸ್ವಂತ ಮತ ಚಲಾಯಿಸುವಷ್ಟೇ ಅಲ್ಲದೆ ಇತರರನ್ನೂ ಮತದಾನ ಮಾಡುವಂತೆ ಪ್ರೇರೇಪಿಸಿ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin