ರಹಸ್ಯ ಸ್ಥಳದಲ್ಲಿ ಬಿಎಸ್‍ವೈ- ಈಶ್ವರಪ್ಪ ನಡುವೆ ಸಂಧಾನಕ್ಕೆ ಕಸರತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Eshwarappa

ಬೆಂಗಳೂರು, ಡಿ.16- ರಾಜ್ಯ ಬಿಜೆಪಿಯಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹಿಂದೆ ಕೆಲ ಆರ್‍ಎಸ್‍ಎಸ್ ನಾಯಕರ ಕೈವಾಡವಿದೆ ಎಂಬ ಮಾಹಿತಿ ಪಡೆದಿರುವ ಬಿಜೆಪಿ ವರಿಷ್ಠರು ಇದೀಗ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ನಡುವೆ ಹೊರರಾಜ್ಯದ ರಹಸ್ಯ ಸ್ಥಳವೊಂದರಲ್ಲಿ ಸಂಧಾನ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಯಾವ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ನಡೆಸದಂತೆ ಪಕ್ಷದ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಮುರುಳೀಧರರಾವ್ ಹೇಳಿದರೂ ನಂದಘಡದಲ್ಲಿ ಸಮಾವೇಶ ನಡೆಸುವ ಮೂಲಕ ಈಶ್ವರಪ್ಪ ಅವರು ಸಡ್ಡು ಹೊಡೆದಿದ್ದರು. ಇದರಿಂದ ಅಸಮಾಧಾನಗೊಂಡ ಮುರುಳೀಧರರಾವ್ ದೆಹಲಿಗೆ ಹೋಗಿ ಪಕ್ಷದ ವರಿಷ್ಠರ ಜತೆ ಮಾತುಕತೆ ನಡೆಸಿದ್ದಲ್ಲದೆ ತಾವು ಸೂಚನೆ ನೀಡಿದ ನಂತರವೂ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಸಿದ್ದು, ಈ ಬೆಳವಣಿಗೆ ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ಕ್ಷೀಣಿಸಲು ಕಾರಣವಾಗುತ್ತದೆ ಎಂದು ದೂರು ನೀಡಿದ್ದರು.

ಇದರ ಬೆನ್ನಲ್ಲೇ ಕಳೆದ ಮಂಗಳವಾರ ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಯಾವ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಗಳನ್ನು ನಡೆಸಬೇಡಿ ಎಂದು ಸೂಚಿಸಿದ್ದರು. ಆದರೆ ಅಮಿತ್ ಷಾ ಸೂಚನೆ ನೀಡಿದ ಬೆನ್ನಲ್ಲೇ ರಂಗಪ್ರವೇಶ ಮಾಡಿದ ಕೆಲ ಆರ್‍ಎಸ್‍ಎಸ್ ನಾಯಕರು, ಕರ್ನಾಟಕದಲ್ಲಿ ಪಕ್ಷವನ್ನು ಯಡಿಯೂರಪ್ಪ ಅವರು ಯಾರಿಗೋ ಅಡ ಇಡಲು ಹೊರಟಿದ್ದಾರೆ. ಅವರು ತಮಗಿಚ್ಚೆ ಬಂದಂತೆ ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಸಮಿತಿಗಳ ನೇಮಕಾತಿಯಾಗುವಂತೆ ಮಾಡಿದ್ದಾರೆ.

ಇದನ್ನು ಸರಿಪಡಿಸಲು ಕರ್ನಾಟಕದ ಆರ್‍ಎಸ್‍ಎಸ್ ಘಟಕ ಸೂಚನೆ ನೀಡಿದ್ದರೂ ಯಡಿಯೂರಪ್ಪ ಅವರು ಅದನ್ನು ಪಾಲಿಸಲಿಲ್ಲ. ಬದಲಿಗೆ ಅದೇ ಪದಾಧಿಕಾರಿಗಳು ಹಾಗೂ ಜಿಲ್ಲಾ ಸಮಿತಿಗಳನ್ನು ಮುಂದುವರಿಸಿದರು. ಈಗಲೂ ಅವರು ಹೇಳಿದಂತೆಯೇ ಪಕ್ಷ ನಡೆದರೆ ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಗಂಡಾಂತರ ಎದುರಿಸಬೇಕಾಗುತ್ತದೆ. ಯಡಿಯೂರಪ್ಪ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಕುರಿತು ವರಿಷ್ಠರು ಸ್ಪಷ್ಟ ನಿರ್ದೇಶನ ನೀಡದಿದ್ದರೆ ರಾಜ್ಯ ಬಿಜೆಪಿಯ ಹಲವು ನಾಯಕರು ಉಲ್ಟಾ ಹೊಡೆಯುತ್ತಾರೆ.  ಅದೆಲ್ಲದರ ಪ್ರತಿಫಲವಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟಿದೆ. ಮೇಲ್ನೋಟಕ್ಕೇನೋ ಈಶ್ವರಪ್ಪ ಅವರು ಮಾತ್ರ ಮುಂಚೂಣಿಯಲ್ಲಿ ಕಾಣಿಸಿಕೊಂಡರೂ ಆಳದಲ್ಲಿ ಹಲವು ನಾಯಕರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನ ಬೆನ್ನಿಗೆ ನಿಂತಿದ್ದಾರೆ.

ಆರ್‍ಎಸ್‍ಎಸ್‍ನ ಜಿಲ್ಲಾ ಘಟಕಗಳು ಕೂಡಾ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜತೆ ನಿಂತಿವೆ. ಹೀಗಾಗಿ ಏಕಾಏಕಿಯಾಗಿ ಈಶ್ವರಪ್ಪ ಅವರಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿರ್ಬಂಧಿಸಿ ಎಂದು ಹೇಳುವ ಬದಲು ಯಡಿಯೂರಪ್ಪ ಮುಂದೇನು ಮಾಡಬೇಕು ಎಂಬ ಕುರಿತು ಸ್ಪಷ್ಟವಾಗಿ ಹೇಳಿ, ಅದು ಪಾಲನೆಯಾದ ನಂತರ ಉಭಯ ನಾಯಕರ ನಡುವೆ ಸಂಧಾನ ನಡೆಸಿ ಎಂದು ಈ ನಾಯಕರು ಹೇಳಿದ್ದಾರೆ. ಹೀಗಾಗಿ ತಿಂಗಳಾಂತ್ಯದ ವೇಳೆಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರನ್ನು ಮಹಾರಾಷ್ಟ್ರ, ಗೋವಾ ಅಥವಾ ಬೇರೆ ಯಾವುದಾದರೂ ರಾಜ್ಯಕ್ಕೆ ಕರೆಸಿ ಸಂಧಾನ ಸಭೆ ನಡೆಸಲು ಅಮಿತ್ ಷಾ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹಿಂದೆ ಹಲವು ಆರ್‍ಎಸ್‍ಎಸ್ ನಾಯಕರು, ಕೆಲ ಬಿಜೆಪಿ ನಾಯಕರು ಇದ್ದಾರೆ ಎಂಬ ಮಾಹಿತಿ ಪಡೆದಿರುವ ಅಮಿತ್ ಷಾ ಇದೀಗ ಉಭಯ ನಾಯಕರನ್ನು ಒಂದೆಡೆ ಸೇರಿಸಿ, ಸಂಧಾನ ಸಭೆ ನಡೆಸಲಿದ್ದಾರೆ. ಹೀಗೆ ಅಮಿತ್ ಷಾ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ವಾಪಸ್ಸಾದ ಈಶ್ವರಪ್ಪ ತಕ್ಷಣವೇ ಬೆಳಗಾವಿಗೆ ತೆರಳಿದ್ದು, ಅಲ್ಲಿ ಆರ್‍ಎಸ್‍ಎಸ್ ಪ್ರಮುಖ ಮುಕುಂದ್ ಅವರಿಗೆ ದೆಹಲಿಯಲ್ಲಿ ನಡೆದ ವಿದ್ಯಮಾನಗಳ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin