ರಾಜ್ಯದಲ್ಲಿ ರಣತಂತ್ರ ರೂಪಿಸಲು ಆಗಸ್ಟ್ ತಿಂಗಳಲ್ಲಿ ಬೆಂಗಳೂರಿಗೆ ಅಮಿತ್ ಷಾ ಆಗಮನ

ಈ ಸುದ್ದಿಯನ್ನು ಶೇರ್ ಮಾಡಿ

yadi

ಬೆಂಗಳೂರು, ಮೇ 16- ರಾಜ್ಯದಲ್ಲಿ ಶತಾಯ-ಗತಾಯ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕೈಗೊಳ್ಳಬೇಕಾದ ರಣತಂತ್ರ ರೂಪಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ರಾಜ್ಯಕ್ಕೆ ಆಹ್ವಾನಿಸಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿಗೆ ಅಮಿತ್ ಷಾ ಆಗಮಿಸಿ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ಮೂರು-ನಾಲ್ಕು ದಿನ ವಾಸ್ತವ್ಯ ಹೂಡಲಿರುವ ರಾಷ್ಟ್ರೀಯ ನಾಯಕರು ಎಲ್ಲರೊಂದಿಗೆ ಅದರಲ್ಲೂ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮಿಷನ್ 150 ಹಾಗೂ ಲೋಕಸಭೆ 25 ಸ್ಥಾನಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದರು.  ಪಕ್ಷದಲ್ಲಿ ಉಂಟಾಗಿದ್ದ ಎಲ್ಲ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿದಿವೆ. ಬೇರು ಮಟ್ಟದಿಂದ ಪಕ್ಷ ಸಂಘಟಿಸಿ ಅಧಿಕಾರಕ್ಕೆ ಬರಲು ಕೈಗೊಳ್ಳಬೇಕಾದ ಕಾರ್ಯತಂತ್ರ ರೂಪಿಸುವುದೇ ನಮ್ಮ ಮುಂದಿನ ಸವಾಲು ಎಂದು ಹೇಳಿದರು.


 

ಎಲ್ಲ ಇಲಾಖೆಯಲ್ಲೂ ಲೂಟಿ: ರಾಜ್ಯ ಸರ್ಕಾರ ಪ್ರತಿಯೊಂದು ಇಲಾಖೆಯಲ್ಲೂ ಲೂಟಿ ಹೊಡೆಯಲು ನಿಂತಿದೆ. 100 ಕೋಟಿ ಯೋಜನೆಗಳಿಗೆ 500 ಕೋಟಿ ಅಂದಾಜು ವೆಚ್ಚ ರೂಪಿಸಿದ್ದಾರೆ.  ಲೋಕೋಪಯೋಗಿ, ನೀರಾವರಿ, ವಿದ್ಯುತ್ ಸೇರಿದಂತೆ ಪ್ರತಿಯೊಂದು ಇಲಾಖೆಯಲ್ಲೂ ಸಚಿವರು ಕೊಳ್ಳೆ ಹೊಡೆಯುವುದನ್ನು ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವುದೇ ಇಲಾಖೆಯಲ್ಲೂ ಮಾಹಿತಿ ಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಕಾಡಿ ಬೇಡಿದರೂ ವಿವರ ನೀಡುವುದಿಲ್ಲ. ಶಾಸಕರು, ಸಚಿವರು ಭೀಕರ ಬರಗಾಲವಿದ್ದರೂ ಬರ ಅಧ್ಯಯನ ಕೈಗೊಂಡಿಲ್ಲ ಎಂದು ದೂರಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂದೇ ದಿನದಲ್ಲಿ ಎರಡು ಸಿನಿಮಾ ನೋಡಲು, ದುಬೈಗೆ ಹೋಗಲು ಸಮಯಾವಕಾಶವಿರುತ್ತದೆ. ಭೀಕರ ಬರಗಾಲದಿಂದ ತತ್ತರಿಸಿರುವ ಕ್ಷೇತ್ರಗಳಿಗೆ ಭೇಟಿ ಕೊಡುವಷ್ಟು ಸಮಯವಿಲ್ಲ ಎಂದು ಕುಹಕವಾಡಿದರು.
ಸಿದ್ದರಾಮಯ್ಯ ಅವರಿಗೆ ಶಾಸಕರು ಹಾಗೂ ಸಚಿವರು ಕವಡೆ ಕಾಸಿನ ಕಿಮ್ಮತ್ತೂ ನೀಡುವುದಿಲ್ಲ. ಇದರಿಂದ ಅಧಿಕಾರಿಗಳ ಮೇಲಿನ ಹಿಡಿತವೂ ತಪ್ಪಿದೆ. ಸರ್ಕಾರಕ್ಕೆ ಲಂಗು-ಲಗಾಮು ಇಲ್ಲದಂತಾಗಿದೆ ಎಂದು ದೂರಿದರು.  ಸರ್ಕಾರಕ್ಕೆ ಪ್ರತಿಪಕ್ಷಗಳ ವಿರುದ್ಧ ಟೀಕೆ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ನಾವು ಬಿಡುಗಡೆ ಮಾಡಿದ್ದ ಚಾರ್ಜ್‍ಶೀಟ್‍ಗೆ ಅಂಕಿ-ಸಂಖ್ಯೆಗಳ ಸಹಿತ ವಿವರ ನೀಡಬಹುದಿತ್ತು. ಬದಲಿಗೆ ಟೀಕೆ ಮಾಡಬೇಕೆಂಬ ಕಾರಣಕ್ಕಾಗಿಯೇ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆರೋಪಿಸಿದರು.  ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಸತ್ಯಕ್ಕೆ ದೂರವಾದುದು. ನೀಡಿರುವ ಮಾಹಿತಿಗೂ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಕೆಲವು ಯೋಜನೆಗಳನ್ನು ಕೈಬಿಡಲಾಗಿದೆ ಎಂದು ಹೇಳಿದರು.

 

ಕೇಂದ್ರದ ಕೆಲವು ಯೋಜನೆಗಳಿಗೆ ಸರ್ಕಾರ ತನ್ನ ಯೋಜನೆ ಎಂದು ಹೇಳಿದೆ. ಕ್ಷೀರಭಾಗ್ಯ, ಬೆಳಕು ಸೇರಿದಂತೆ ಅನೇಕ ಯೋಜನೆಗಳು ಕೇಂದ್ರ ಸರ್ಕಾರದ್ದಾಗಿದ್ದರೂ ರಾಜ್ಯ ಸರ್ಕಾರ ತನ್ನ ಯೋಜನೆ ಎಂದು ಕೊಚ್ಚಿಕೊಳ್ಳುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಲದ ಪ್ರಮಾಣ ಹೆಚ್ಚಳ ಮಾಡಿದೆ. ಇದೇ ಇವರ ಮಹಾನ್ ಸಾಧನೆ, ನಮ್ಮ ಅಧಿಕಾರಾವಧಿಯಲ್ಲಿ 1 ಲಕ್ಷ ಕೋಟಿ ಇದ್ದ ಸಾಲ ಈಗ 2 ಲಕ್ಷ ಕೋಟಿಗೆ ಏರಿದೆ. ಆರ್ಥಿಕ ಶಿಸ್ತು ಇಲ್ಲದಿರುವುದೇ ಇದಕ್ಕೆ ಕಾರಣ. ಭಾಗ್ಯಗಳ ಹೆಸರಿನಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಗಂಭೀರವಾಗಿ ದೂರಿದರು.

 

ಜನಸಂಪರ್ಕ ಯಾತ್ರೆ: ಇದೇ 18ರಿಂದ ಜೂನ್ 26ರ ವರೆಗೆ ರಾಜ್ಯಾದ್ಯಂತ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಾಗುವುದು. ತಾವು ಸೇರಿದಂತೆ ಕೇಂದ್ರ ಸಚಿವವರಾದ ಅನಂತ್‍ಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಹಾಗೂ ಪಕ್ಷದ ಅನೇಕರು ಪ್ರವಾಸ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.  ಈ ಹಿಂದೆ ಮೊದಲ ಪ್ರವಾಸದಲ್ಲಿ ಕೈಗೊಂಡ ಅಧ್ಯಯನಗಳ ಸ್ಥಿತಿಗತಿ ಕುರಿತಂತೆ ರಾಜ್ಯಪಾಲರಿಗೆ ವರದಿ ನೀಡಲಾಗಿತ್ತು. ಎರಡನೆ ಪ್ರವಾಸದ ನಂತರ ರಾಜ್ಯಪಾಲರಿಗೆ ಮತ್ತೊಂದು ವರದಿ ನೀಡಲಾಗುವುದು ಎಂದರು.  ಪತ್ರಿಕಾಗೋಷ್ಠಿಯಲ್ಲಿ ಆರ್.ಅಶೋಕ್, ಅಶ್ವತ್ಥ ನಾರಾಯಣ್, ಮಾಳವಿಕಾ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin