ರಾಜ್ಯದ ಹಲವೆಡೆ ಆರ್ಭಟಿಸಿದ ಮಳೆರಾಯ, ಕೊಚ್ಚಿ ಹೋದ ಕೆಎಸ್‍ಆರ್‍ಟಿಸಿ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

Bus-Rain--01

ಬೆಂಗಳೂರು, ಮೇ 15– ರಾಜ್ಯದ ವಿವಿಧೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಮಗು ಸೇರಿದಂತೆ ಐವರು ಬಲಿಯಾಗಿರುವ ಘಟನೆ ನಡೆದಿರುವುದಲ್ಲದೆ ಗದಗದ ಶಿರಹಟ್ಟಿ ತಾಲ್ಲೂಕಿನ ದೊಡ್ಡೂರು ಗ್ರಾಮದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ವೊಂದು ಕೊಚ್ಚಿ ಹೋಗಿದ್ದು, ನೀರಿನಲ್ಲಿ ಸಿಲುಕಿದ್ದ ಐವರನ್ನು ರಕ್ಷಿಸಲಾಗಿದೆ. ಬಿರುಗಾಳಿ ಸಹಿತ ಸುರಿದ ವರುಣನ ಅವಾಂತರಕ್ಕೆ ಪ್ರಾಣಿ ಪಕ್ಷಿಗಳು ಕೂಡ ಬಲಿಯಾಗಿರುವ ಬಗ್ಗೆ ವರದಿಯಾಗಿದೆ.  ಬಾಗಲಕೋಟೆ ಜಿಲ್ಲೆಯ ಕಿರಸೂರು ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗಡು ಹಾಗೂ ತಗಡಿನ ಶೆಡ್ ಮೇಲೆ ಇಟ್ಟ ಕಲ್ಲು ಬಿದ್ದು ದೀಪಾ ಕಡೆಮನಿ(9) ಎಂಬ ಬಾಲಕಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.ಬಳ್ಳಾರಿಯ ನಾಗಲಕೆರೆ ಪ್ರದೇಶದಲ್ಲಿ ಮನೆ ಮೇಲೆ ಗುಡ್ಡದ ಕಲ್ಲು ಕುಸಿದು ಸಂಭವಿಸಿದ ಹಾನಿಯಲ್ಲಿ ಶಿವು(12) ಎಂಬ ಬಾಲಕ ಸಾವನ್ನಪ್ಪಿದ್ದು , ಮೂವರಿಗೆ ಗಂಭೀರ ಗಾಯಗಳಾಗಿವೆ. ರಾತ್ರಿ ಭಾರೀ ಗಾಳಿಯೊಂದಿಗೆ ಮಳೆ ಬಿದ್ದ ಹಿನ್ನೆಲೆಯಲ್ಲಿ ಕಲ್ಲು ಬಂಡೆ ಕುಸಿದಿದ್ದರಿಂದ ಈ ಅನಾಹುತ ಸಂಭವಿಸಿದ್ದು, ಸ್ಥಳಕ್ಕೆ ಕೌಲ್‍ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ರಾತ್ರಿ ಭಟ್ಕಳ ತಾಲ್ಲೂಕಿನ ಮದೀನ ಕಾಲೋನಿಯಲ್ಲಿ ಸುಫಿಯಾ ಎಂಬ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಮನೆಯ ಕಿಟಕಿಯ ಪಕ್ಕ ಮಲಗಿದ್ದಾಗ ನಿನ್ನೆ ರಾತ್ರಿ ಸಿಡಿಲು ಬಡಿದು ಮೃತಪಟ್ಟಿದ್ದು , ಪಕ್ಕದಲ್ಲೇ ಮಲಗಿದ್ದ ಮುಬಾರಕ್, ಮೊಹಮ್ಮದ್ ಕೈಫ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು , ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ನಿನ್ನೆ ಸಂಜೆ ಸಿಡಿಲು ಬಡಿದು ಅಂಬೇಡ್ಕರ್ ನಗರದ ನಿವಾಸಿ ಫಕ್ಕೀರವ್ವ ಶಿವಪ್ಪ ಸಣ್ಣತಮ್ಮಣ್ಣನವರ್ ಎಂಬುವರು ಮೃತಪಟ್ಟಿದ್ದಾರೆ. ಜಮೀನಿನ ಕೆಲಸ ಮಾಡಿ ಹಿಂದಿರುಗುತ್ತಿದ್ದಾಗ ಸಿಡಿಲು ಬಡಿದಿದ್ದು , ಇವರ ಜೊತೆಯಲ್ಲಿದ್ದ ಮೇಕೆಯೂ ಕೂಡ ಸಾವನ್ನಪ್ಪಿದೆ.   ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದಲ್ಲಿ ಸಿಡಿಲಿಗೆ ದೇವಗಿರಿ ಮಠ(35) ಮೃತಪಟ್ಟಿದ್ದಾರೆ. ಮನೆಯಲ್ಲಿ ದನಗಳನ್ನು ಕಟ್ಟುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Bus-Rain--02

ಗದಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿ ಕೆಎಸ್‍ಆರ್‍ಟಿಸಿ ಬಸ್ ಶಿರಹಟ್ಟಿ ತಾಲ್ಲೂಕಿನ ದೊಡ್ಡೂರು ಗ್ರಾಮದ ಸೇತುವೆ ಬಳಿ ಚಲಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಚಾಲಕ, ನಿರ್ವಾಹಕ ಸೇರಿದಂತೆ ಐದು ಮಂದಿ ಬಸ್‍ನಲ್ಲಿದ್ದು, ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಆಗಮಿಸಿ ಹಗ್ಗದ ಸಹಾಯದಿಂದ ಇವರನ್ನು ರಕ್ಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಿಳಗಿ ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಮರದಲ್ಲಿ ವಾಸವಾಗಿದ್ದ ನೂರಾರು ಪಕ್ಷಿಗಳು ಮಳೆಯ ಹೊಡೆತಕ್ಕೆ ಬಲಿಯಾಗಿವೆ. ಇಂದು ನಸುಕಿನ ಜಾವ ಬಿದ್ದ ಬಿರುಗಾಳಿ ಸಹಿತ ಮಳೆಗೆ ಹಾಗೂ ಸಿಡಿಲಿನ ಹೊಡೆತಕ್ಕೆ ನೂರಾರು ಪಕ್ಷಿಗಳು ಸತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

Bus-Rain--03

ತುಮಕೂರು ಜಿಲ್ಲೆ ಹುಳಿಯಾರು ಸಮೀಪದ ಸೀಗೆಬಾಗಿಯಲ್ಲಿ ಸಿಡಿಲು ಬಡಿದು ಗುಡಿಸಲೊಂದು ಸಂಪೂರ್ಣವಾಗಿ ಭಸ್ಮವಾಗಿದೆ. ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಗದಗ, ಹುಬ್ಬಳ್ಳಿ , ಹಾವೇರಿ, ಕಲಬರುಗಿ ಮುಂತಾದೆಡೆ ಭಾರೀ ಮಳೆಯಾಗಿದ್ದು , ಮಳೆಗೆ ಮನೆಯ ಶೆಡ್‍ಗಳು ಹಾರಿಹೋಗಿವೆ. ವಿದ್ಯುತ್ ಕಂಬಗಳು, ಮರಗಳು ಉರುಳಿಬಿದ್ದು ಅಪಾರ ನಷ್ಟ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಬುಕ್ಲೋರಳ್ಳಿ ಗ್ರಾಮದಲ್ಲಿ ಸಿಡಿಲಿಗೆ 10ಕ್ಕೂ ಹೆಚ್ಚು ಕುರಿಗಳು ಅಸುನೀಗಿವೆ.

ಹಾಸನದ ಬೇಲೂರಿನಲ್ಲಿ ನಿನ್ನೆ ಬಿದ್ದ ಗುಡುಸಹಿತ ಭಾರೀ ಮಳೆಗೆ ಭಾರೀ ಗಾತ್ರದ ಮರಗಳು ಧರೆಗುರುಳಿವೆ. ಬೇಲೂರು ಸಮೀಪ ರಸ್ತೆ ಅಕ್ಕಪಕ್ಕದ ಮರಗಳು ಉರುಳಿ ಬಿದ್ದಿವೆ. ತುಮಕೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮರಗಳು ಧರೆಗುರುಳಿವೆ. ಶಿರಾ ತಾಲ್ಲೂಕಿನ ರತ್ನಸಂದ್ರದ ನ್ಯಾಯಗಿರಿಯಲ್ಲಿ 30 ಮನೆಗಳಿಗೆ ಹಾನಿಯಾಗಿವೆ. ವಿದ್ಯಾನಗರದ ಮನೆಯೊಂದರ ಮೇಲೆ ತೆಂಗನ ಮರ ಉರುಳಿ ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಹಲವೆಡೆ ವಿದ್ಯುತ್ ಕಂಬಗಳು ತುಂಡರಿಸಿವೆ. ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಎನ್‍ಎಚ್ 4ರಲ್ಲಿ ಗಂಟೆಗಟ್ಟಲೆ ಟ್ರಾಫಿಕ್‍ಜಾಮ್ ಉಂಟಾಗಿತ್ತು. ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿದ್ದರಿಂದ ರಾತ್ರಿಯಿಡಿ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಯಿತು.

ರಸ್ತೆಯುದ್ದಕ್ಕೂ ಉರುಳಿದ್ದ ಮರ:ಸಂಚಾರ ಅಸ್ತವ್ಯಸ್ತ 

ಬೇಲೂರು, ಮೇ 15- ಗುಡುಗು ಸಿಡಿಲು ಮತ್ತು ಗಾಳಿ ಮಳೆಯ ಆರ್ಭಟಕ್ಕೆ ಹಾಸನ-ಬೇಲೂರು ರಸ್ತೆಯಲ್ಲಿನ ಮರಗಳು ರಸ್ತೆಯುದ್ದಕ್ಕೂ ಬಿದ್ದಿದ್ದರಿಂದ ವಾಹನಗಳ ಸವಾರರು ಸುಮಾರು ಎರಡು ಗಂಟೆಗಳಿಗೂ ಹೆಚ್ಚುಕಾಲ ಪರದಾಡುವಂತಾಯಿತು.  ನಿನ್ನೆ ಸಂಜೆ 4 ಗಂಟೆ ಸಮಯದಲ್ಲಿ ಜೋರಾದ ಗುಡುಗು ಸಿಡಿಲಿನಿಂದ ಗಾಳಿಯೊಂದಿಗೆ ಬಿರುಸಾಗಿ ಬಂದ ಬಿರುಗಾಳಿ ಮಳೆಯಿಂದ ವಾಹನಗಳ ಸವಾರರಿಗೆ ರಸ್ತೆ ಕಾಣದೆ ಕೆಲವರು ರಸ್ತೆ ಪಕ್ಕದಲ್ಲಿನ ಗುಂಡಿಗಳಿಗೆ ವಾಹನ ಇಳಿಸಿದರೆ ಮತ್ತೆ ಕೆಲವರು ಮುಂಭಾಗದಲ್ಲಿದ್ದ ವಾಹನಗಳಿಗೆ ಮುತ್ತಿಟ್ಟಿದ್ದಾರೆ.

Bus-Rain--03

ಹಾಸನ-ಬೇಲೂರು ರಸ್ತೆಯ ಸಂಕೇನಹಳ್ಳಿ, ಇಬ್ಬೀಡು ಹಾಗೂ ಸೂರಾಪುರ ಗ್ರಾಮಗಳ ರಸ್ತೆಯ ನಡುವಿನಲ್ಲಿ ಸುಮಾರು ಮರಗಳು ಬಿರುಗಾಳಿ ಮಳೆಗೆ ಸಿಲುಕಿ ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಾಹನಗಳ ಸವಾರರು ಕಿಲೋ ಮೀಟರ್ ಗಟ್ಟಲೆ ಮಳೆಯ ನಡುವೆ ಇಳಿಯಲೂ ಆಗದೆ, ಇತ್ತ ವಾಹನದಲ್ಲಿ ಕೂರಲು ಆಗದೆ ಪರದಾಡುತ್ತಿದ್ದರು.  ಈ ಸಂದರ್ಭದಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಅಸ್ಪತ್ರೆಗೆ ಸೇರಿದ ವಾಹನದಲ್ಲಿದ್ದ ಸಿಬಂ್ಬದಿಗಳು ಬಿರುಸಾಗಿ ಬರುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಇಬ್ಬೀಡು ಬಳಿಯಲ್ಲಿ ರಸ್ತೆ ಮದ್ಯದಲ್ಲಿ ಬಿದ್ದಿದ್ದ ಮರಗಳನ್ನು ಸಾರ್ವಜನಿಕರೊಂದಿಗೆ ಸೇರಿ ತೆರವುಗೊಳಿಸಿದ್ದರಿಂದ ಎರಡು ಗಂಟೆಗಳಿಂದ ಕಿಲೋ ಮೀಟರ್ ಗಟ್ಟಲೆ ನಿಂತಿದ್ದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಸಾರ್ವಜನಿಕರಿಂದ ಮೆಚ್ಚುಗೆ ಪಡೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin