ರೈತರಿಗೆ ನಬಾರ್ಡ್’ನಿಂದ 1.2 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

ganagi

ಬೆಂಗಳೂರು, ಫೆ.21- ಮುಂದಿನ ಆರ್ಥಿಕ ವರ್ಷದಲ್ಲಿ ನಬಾರ್ಡ್ ಬ್ಯಾಂಕ್ ವತಿಯಿಂದ ರೈತರಿಗೆ 1.2 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಗಣಗಿ ಹೇಳಿದ್ದಾರೆ.  ನಬಾರ್ಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, 2017-18ನೇ ಸಾಲಿನಲ್ಲಿ ರಾಜ್ಯಕ್ಕೆ ಬ್ಯಾಂಕ್ ವತಿಯಿಂದ 1.2ಲಕ್ಷ ರೂ. ಕೋಟಿ ರೂ. ಸಾಲ ನೀಡುವ ಗುರಿ ಹೊಂದಿದ್ದೇವೆ. ಇದರಲ್ಲಿ ನಾವು ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.

2005ರಲ್ಲಿ ಕರ್ನಾಟಕಕ್ಕೆ ನಬಾರ್ಡ್‍ನಿಂದ ಕೇವಲ 12 ಸಾವಿರ ಕೋಟಿ ಕೃಷಿ ಸಾಲ ನೀಡಲಾಗಿತ್ತು. 2015-16ರಲ್ಲಿ 84 ಸಾವಿರ ರೂ. ಕೋಟಿ ಸಾಲ ವಿತರಿಸಲಾಗಿತ್ತು. ಕೃಷಿ ಉತ್ಪಾದನೆ ಹೆಚ್ಚಾದಂತೆ ಸಾಲದ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ ಎಂದರು. 2014-15ರಲ್ಲಿ ಕೃಷಿ ಬೆಳವಣಿಗೆ ಶೇ.16ರಷ್ಟಿತ್ತು. 4 ದಶಕಗಳ ನಂತರ ರಾಜ್ಯದಲ್ಲಿ ಭೀಕರ ಬರಗಾಲ ಎದುರಾದ ಪರಿಣಾಮ 2016-17ರಲ್ಲಿ ಕೃಷಿ ಬೆಳವಣಿಗೆಗೆ ಶೇ.6.7ರಷ್ಟು ಕುಂಟಿತಗೊಂಡಿದೆ. ಇದು ಊಹಿಸಲು ಅಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.

ಬರಗಾಲ ಆವರಿಸಿದ ಪರಿಣಾಮ ಕೃಷಿ ಹಾಗೂ ವಾಣಿಜ್ಯ ಉತ್ಪನ್ನಗಳ ಉತ್ಪಾದನೆ ಕುಸಿತಗೊಂಡಿವೆ. ಆಹಾರ ಉತ್ಪನ್ನಗಳನ್ನು ಶೇಖರಣೆ ಮಾಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಆಗದಿದ್ದರೆ ಜನಸಂಖ್ಯೆಗನುಗುಣವಾಗಿ ಸರಿದೂಗಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು. ವಿಜ್ಞಾನಗಳು ಮತ್ತು ಕೃಷಿ ತಜ್ಞರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಒಂದು ಎಕರೆಯಲ್ಲಿ ಹೆಚ್ಚಿನ ಬೆಳೆ ಬೆಳೆಯಬಹುದು ಎಂದು ವಿಜ್ಞಾನಿಗಳು ಹೇಳಿದರೆ ಕೃಷಿ ತಜ್ಞರು ಇದನ್ನು ಒಪ್ಪುವುದಿಲ್ಲ. ಇಬ್ಬರ ನಡುವೆ ಅಂvರವಿರುವುದರಿಂದ ಯಾರ ಮಾತನ್ನು ನಂಬಬೇಕೆಂಬ ಜಿಜ್ಞಾಸೆ ರೈತರಲ್ಲಿದೆ. ಹಾಗಾಗಿ ಭಿನ್ನಾಭಿಪ್ರಾಯವನ್ನು ಕಡಿಮೆ ಮಾಡಬೇಕೆಂದರು.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಆ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದ್ದರಿಂದ ಶೇಕಡಾವಾರು ಒಣ ಭೂಮಿ ಹೆಚ್ಚಾಗಿದೆ. ನೀರಾವರಿ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ಮಾಡಿದರು.  ಬೆಳೆ ನಷ್ಟವಾದರೆ ರೈತರು ಹತಾಶರಾಗುವುದು ಬೇಡ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕಾಗಿ ವಿಶೇಷ ಯೋಜನೆ ಜಾರಿ ಮಾಡಿವೆ.   ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಬೆಳೆವಿಮೆ ಪರಿಹಾರ ಸೇರಿದಂತೆ ಅನೇಕ ಯೋಜನೆಗಳಿವೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin