ಲಿಂಗಸಗೂರು ತಾಲೂಕಿನ 3 ಗ್ರಾಮಗಳು ಜಲಾವೃತ, 60 ಮಂದಿಗೆ ಕೃಷ್ಣೆಯ ಜಲ ದಿಗ್ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು, ಸೆ.22- ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿರುವ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿದ್ದರಿಂದ ಈ ಭಾಗದ ಮೂರು ಗ್ರಾಮಗಳು ಜಲಾವೃತಗೊಂಡಿವೆ. 60ಕ್ಕೂ ಹೆಚ್ಚು ಜನರು ನಡುಗಡ್ಡೆಗಳಲ್ಲಿ ಜಲದಿಗ್ಬಂಧನಕ್ಕೆ ಸಿಲುಕಿದ್ದಾರೆ. ಲಿಂಗಸುಗೂರು ತಾಲೂಕಿನ ಮ್ಯಾದರಗಡ್ಡಿ, ಕಡದರಗಡ್ಡಿ ಹಾಗೂ ಓಂಕಾರಗಡ್ಡಿ ಗ್ರಾಮಗಳು ಕೃಷ್ಣಾನದಿ ನೀರಿನಲ್ಲಿ ಜಲಾವೃತಗೊಂಡಿವೆ. ಗ್ರಾಮದ ಹತ್ತಾರು ಕುಟುಂಬಗಳು ನಡುಗಡ್ಡೆಗಳಲ್ಲಿ ಸಿಲುಕಿ ನರಳುತ್ತಿದ್ದಾರೆ.

ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರದಲ್ಲಿ ಸತತ ಮಳೆಯಾಗುತ್ತಿದ್ದು, ಇದರಿಂದಾಗಿ ಕೃಷ್ಣಾನದಿ ತುಂಬಿ ಹರಿಯುತ್ತಿದೆ. ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ಬಸವ ಸಾಗರ ಜಲಾಶಯ ಭರ್ತಿಯಾಗಿ ಅಪಾಯದ ಮಟ್ಟಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಅಧಿಕಾರಿಗಳು ಕೃಷ್ಣಾ ನದಿಗೆ ಡ್ಯಾಮ್‍ನಿಂದ 1.35 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರು. ನೀರು ಅಧಿಕವಾಗಿದ್ದರಿಂದ ಕೃಷ್ಣಾ ನದಿ ಪಾತ್ರದ ಈ ಮೂರೂ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, 18ಕ್ಕೂ ಹೆಚ್ಚು ಕುಟುಂಬಗಳ 60 ಜನರು ಇನ್ನೂ ನಡುಗಡ್ಡೆಯಲ್ಲಿ ಜಲದಿಗ್ಬಂಧನದಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಲಿಂಗಸುಗೂರಿನ ಎಸಿ ದಿವ್ಯಾ ಕಂದಾಯ ಅಧಿಕಾರಿಗಳಿಗೆ ನಡುಗಡ್ಡೆಯಲ್ಲಿ ಸಿಲುಕಿರುವವರನ್ನು ರಕ್ಷಿಸುವಂತೆ ಸೂಚಿಸಿದ್ದರು. ಅದರಂತೆ ಕಂದಾಯ ಇಲಾಖಾ ಅಧಿಕಾರಿಗಳು ಗ್ರಾಮಸ್ಥರನ್ನು ನಡುಗಡ್ಡೆಯಿಂದ ಬರುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಇದನ್ನು ಜನತೆ ತಿರಸ್ಕರಿಸಿದ್ದಾರೆ. ಆದರೂ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಗ್ರಾಮಸ್ಥರೊಂದಿಗೆ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಅವರನ್ನು ನಡುಗಡ್ಡೆಯಿಂದ ಬರುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.

ಪ್ರತಿ ಬಾರಿ ಡ್ಯಾಂನಿಂದ ನೀರು ಹೊರಬಿಟ್ಟಾಗ ನಮ್ಮ ಗ್ರಾಮಗಳಿಗೆ ಇದೇ ಪರಿಸ್ಥಿತಿಯಾಗುತ್ತದೆ. ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಾವು ನಡುಗಡ್ಡೆಯಲ್ಲೇ ಇರುತ್ತೇವೆ ಎನ್ನುವ ಮೂಲಕ ಜನ ಸರ್ಕಾರದ ನಿರ್ಲಕ್ಷ್ಯ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin