ಲೋಕಸಭೆ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಗೆ ಜೆಡಿಎಸ್ ನಿರ್ಣಯ

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಬೆಂಗಳೂರು,ಜು.20- ಜೆಡಿಎಸ್‍ನ ರಾಜ್ಯ ಮಟ್ಟದ ಮಹಿಳಾ ಬೃಹತ್ ಸಮಾವೇಶದಲ್ಲಿ ಲೋಕಸಭೆ ಮತ್ತು ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.  ಅರಮನೆ ಮೈದಾನದಲ್ಲಿ ಇಂದು ನಡೆದ ಮಹಿಳಾ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು , ಕೂಡಲೇ ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವ ವಿಧೇಯಕವನ್ನು ಸಂಸತ್‍ನಲ್ಲಿ ಮಂಡಿಸುವಂತೆ ಒತ್ತಾಯಿಸಲಾಯಿತು.  ಶೇ.33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ   ನೀಡುವ ಮೂಲಕ ಮುಂದಿನ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಜಾರಿಗೊಳಿಸಲು ಆಗ್ರಹಿಸುವುದು ಸೇರಿದಂತೆ ಮಹಿಳಾ ಸಬಲೀಕರಣದ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವಂತೆ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ನ್ಯಾಯಾಂಗ ವ್ಯವಸ್ಥೆಯಲ್ಲಿ, ನ್ಯಾಯಾಧೀಶರ ನೇಮಕದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ದೊರಕಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಪ್ರತಿ ಉಪವಿಭಾಗ ಮಟ್ಟದಲ್ಲಿ ಮಹಿಳಾ ಪೊಲೀಸ್ ಠಾಣೆ ಹಾಗೂ ಕೋರ್ಟ್‍ಗಳನ್ನು ಸ್ಥಾಪಿಸಬೇಕು. ಅರೆ ಸರ್ಕಾರಿ ಹಾಗೂ ಖಾಸಗಿ ಮಹಿಳೆಯರಿಗೆ ಕಡ್ಡಾಯವಾಗಿ ಹೆರಿಗೆ ಮತ್ತು ಸೌಲಭ್ಯವನ್ನು ವೇತನ ಸಹಿತ ನೀಡಲು ಕಾನೂನು ರಚನೆ ಮಾಡಬೇಕು ಎಂಬ ಬಗ್ಗೆ ಒತ್ತಾಯ ಹೇರಲು ನಿರ್ಣಯ ಅಂಗೀಕರಿಸಲಾಯಿತು.

JDS--03

ಮಹಿಳಾ ಕೃಷಿ ಕಾರ್ಮಿಕರಿಗೆ ವಿಶೇಷ ಆರೋಗ್ಯ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಇತರೆ ರಾಜ್ಯಗಳಲ್ಲಿ ನೀಡುತ್ತಿರುವ ವೇತನಕ್ಕೆ ಅನುಗುಣವಾಗಿ ಹೆಚ್ಚುವರಿ ವೇತನ ನೀಡುವುದು ಸೇರಿದಂತೆ ಇನ್ನಿತರ ನಿರ್ಣಯಗಳನ್ನು ಕೈಗೊಳ್ಳಲಾಯಿತು.  ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮುಖಂಡರು, ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಇದುವರೆಗೂ ಆ ಮಸೂದೆಗೆ ಒಪ್ಪಿಗೆ ದೊರೆತಿಲ್ಲ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ಹಾಗೂ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದ್ದನ್ನು ಪ್ರಸ್ತಾಪಿಸಿ ಇದೇ ಮಸೂದೆಯನ್ನು ಪ್ರಸ್ತುತ ಕೇಂದ್ರ ಸರ್ಕಾರ ಅಂಗೀಕರಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕೆಂದು ಆಗ್ರಹಿಸಿದರು.

JDS--02

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಾಯಕ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕರಾದ ಕೆ.ಗೋಪಾಲಯ್ಯ, ಎನ್.ಎಚ್.ಕೋನರೆಡ್ಡಿ, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಸೇರಿದಂತೆ ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ಮುಖಂಡರು ಭಾಗವಹಿಸಿದ್ದರು.

ಮಹಿಳಾ ಶಕ್ತಿ ಪ್ರದರ್ಶನ:

ನಗರದ ಅರಮನೆ ಮೈದಾನದಲ್ಲಿಂದು ನಡೆದ ಜೆಡಿಎಸ್ ಮಹಿಳಾ ಸಮಾವೇಶ ಮಹಿಳಾ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿತ್ತು.  ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದ ನೇತೃತ್ವವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಹಿಸಿದ್ದರು. ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ, ಮಹಿಳೆಯರಿಗಾಗಿ ವಿಶೇಷ ಪೊಲೀಸ್ ಠಾಣೆ ಮತ್ತು ಕೋರ್ಟ್ ಪ್ರಾರಂಭಿಸುವಂತೆ ಒತ್ತಾಯಿಸಿ ಇಂದಿನ ಸಮಾವೇಶದಲ್ಲಿ ಆಗ್ರಹಿಸಲಾಯಿತಲ್ಲದೆ ಈ ಸಂಬಂಧ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಲಂಬಾಣಿ ಉಡುಗೆ-ತೊಡುಗೆ ತೊಟ್ಟ ಮಹಿಳಾ ತಂಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತೆಯರು ಹಾಗೂ ಮಹಿಳೆಯರೇ ಅರಮನೆ ಮೈದಾನದಲ್ಲಿ ನೆರೆದಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin