ವರ ನೀಡುವ ವರಮಹಾಲಕ್ಷ್ಮಿ ಪೂಜೆ ಏಕೆ ಮಾಡಬೇಕು..? ಹೇಗೆ ಮಾಡಬೇಕು..?

ಈ ಸುದ್ದಿಯನ್ನು ಶೇರ್ ಮಾಡಿ

Varamahalakshmi

– ವೈಷ್ಣವಿ
ಶ್ರಾವಣ ಮಾಸ ಬಂದಾಗ ಆನಂದ ತಂದಾಗ…. ಹೌದು … ಶ್ರಾವಣ ಮಾಸವೆಂದರೆ ಸಡಗರ-ಸಂಭ್ರಮದ ಮಾಸ. ನವ ಜೋಡಿಗಳು ಹೊಸ ಬಾಳಿನಲ್ಲಿ ನಿಲ್ಲಲು ಕೂಡ ಇದೇ ಕಾಲ ಪ್ರಸ್ತುತ. ಹಾಗೆಯೇ ಯುಗಾದಿ ನಂತರ ಹಬ್ಬದ ಸಡಗರವು  ಕೂಡ ಶುರುವಾಗುವುದು ಶ್ರಾವಣ ಮಾಸದಲ್ಲೇ.  ಪ್ರತಿಯೊಬ್ಬರಿಗೂ ಆಯಸ್ಸು, ಐಶ್ವರ್ಯ, ಸಂಪತ್ತು ಎಲ್ಲವೂ ಬೇಕೇ ಬೇಕು. ಮುತ್ತೈದೆಯರು ತಮ್ಮ ಗಂಡನ ಆಯಸ್ಸನ್ನು ವೃದ್ಧಿಸಿಕೊಳ್ಳಲು ಭೀಮನ ಅಮಾವಾಸ್ಯೆ ಆಚರಿಸಿದ್ದಾರೆ. ಮನೆಯಲ್ಲೇ ಅಷ್ಟೈಶ್ವರ್ಯಗಳು ನೆಲೆಸಲಿ ಎಂದು ಕನಕ (ಐಶ್ವರ್ಯ)ದ ಅಧಿದೇವತೆಯಾದ ಲಕ್ಷ್ಮಿಯನ್ನು ಆರಾಧಿಸುವ ವರಮಹಾಲಕ್ಷ್ಮಿ ಹಬ್ಬವು ಕೂಡ ಎಲ್ಲರ ಮೊಗದಲ್ಲೂ ಸಡಗರವನ್ನು ಮೂಡಿಸುತ್ತದೆ. ಶ್ರಾವಣ ಮಾಸದ ಎರಡನೆ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಪ್ರಾಮುಖ್ಯತೆ ಲಕ್ಷ್ಮಿಯನ್ನು ಅಷ್ಟ ಲಕ್ಷ್ಮೀ ಎಂದು ಬಣ್ಣಿಸಲಾಗುತ್ತದೆ. ಧೈರ್ಯ, ಸಂತಾನ, ಐಶ್ವರ್ಯ ಮುಂತಾದವುಗಳಿಗೆ ಅಧಿದೇವತೆಯಾಗಿರುವ ಲಕ್ಷ್ಮಿಯನ್ನು  ವಿಶಿಷ್ಟವಾಗಿ ದಕ್ಷಿಣ ಭಾರತದಲ್ಲೇ ಹೆಚ್ಚಾಗಿ ಪೂಜಿಸುತ್ತಾರೆ.

ಅದರಲ್ಲೂ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಇದು ಪ್ರಮುಖ ಹಬ್ಬ. ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿದರೆ ಮನೆಯಲ್ಲಿ ಸುಖ, ಸಂಪತ್ತು ನೆಲೆಸುತ್ತದೆ ಎಂಬ ನಂಬುಗೆ ಇರುವುದರಿಂದ ಯಾವುದೇ ಜಾತಿ, ಭೇದ, ಮತ ಎನ್ನುವುದನ್ನು ನೋಡದೆ ಎಲ್ಲರೂ ಆಚರಿಸುತ್ತಾರೆ.  ಲಕ್ಷ್ಮೀ ಪೂಜೆಯನ್ನು ಮಾಡಬೇಕೆಂದು ಎಲ್ಲರಿಗೂ ಮನಸ್ಸಿರುತ್ತದೆ. ಆದರೆ, ಆ ಪೂಜೆಯನ್ನು ಮಾಡಲು ಯಾವ ಯಾವ ಪೂಜಾ ಸಾಮಗ್ರಿಗಳನ್ನು ಬಳಸಬೇಕು, ಆ ವಸ್ತುಗಳ ಪ್ರಾಮುಖ್ಯತೆ ಏನು ಎಂಬುದನ್ನು ಹಿರಿಯರಿಂದ ಕೇಳಿ ಅರಿತುಕೊಂಡರೆ ಮತ್ತಷ್ಟು ಒಳ್ಳೆಯದಾಗುತ್ತದೆ.

# ಲಕ್ಷ್ಮೀ ಮುಖವಾಡ
ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಬೇಕೆಂದರೆ ಲಕ್ಷ್ಮೀಯ ಮುಖವಾಡ ಪ್ರಾಮುಖ್ಯತೆ ಪಡೆಯುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಲಕ್ಷ್ಮೀಯ ಮುಖವಾಡಗಳು ರಾರಾಜಿಸುತ್ತಿವೆ. ಲಕ್ಷ್ಮೀ ಮುಖವಾಡವನ್ನು ಖರೀದಿಸಲು ಶಕ್ತರಲ್ಲದವರು ತೆಂಗಿನಕಾಯಿಯನ್ನು ಕಳಶ ರೂಪದಲ್ಲಿಟ್ಟು ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮೀ ಒಲಿಯುತ್ತಾಳೆ.

# ಕುಂಕುಮ
ಮುತ್ತೈದೆಯರಿಗೆ ಪ್ರಮುಖವಾಗಿ ಬೇಕಾಗುವುದು ಕುಂಕುಮ. ಅರಿಶಿನ- ಕುಂಕುಮವು ಶುಭದ ಸಂಕೇತ. ಆದ್ದರಿಂದ ವರಮಹಾಲಕ್ಷ್ಮೀಯನ್ನು ಪೂಜಿಸುವ ಸಾಮಾಗ್ರಿಗಳಲ್ಲಿ ಅರಿಶಿನ-ಕುಂಕುಮಕ್ಕೂ ಪ್ರಾಮುಖ್ಯತೆ ಇದೆ. ವಿವಾಹಿತ ಮಹಿಳೆಯ ರಿಂದ ಪೂಜಿಸಲಾಗುವ ಈ ವ್ರತದಲ್ಲಿ ಕುಂಕುಮಾರ್ಚನೆ ಮಾಡಿ, ದೇವಿಗೆ ಕುಂಕುಮ ಅಲಂಕಾರ ಮಾಡುವುದು ಬಹಳ ಶ್ರೇಷ್ಠವಾದದ್ದು.

Varamahalakshimi-1

# ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ
ಗಂಧದ ಸಿಂಚನ  : 
ಕರುನಾಡು ಗಂಧದ ಬೀಡು ಎನ್ನುತ್ತಾರೆ, ಅದೇ ರೀತಿ ವರಲಕ್ಷ್ಮಿಯ ಪೂಜಾ ವಿಧಾನದಲ್ಲಿ ಶ್ರೀಗಂಧವನ್ನು ಪ್ರಮುಖವಾಗಿ ಬಳಸಲಾಗುತ್ತದೆ.  ದೇವಿಯನ್ನು ಅಲಂಕರಿಸಲು ಹಾಗೂ ಪೂಜಾ ವಸ್ತುಗಳನ್ನು ಶುಭ್ರಗೊಳಿಸಲು ಗಂಧವನ್ನು ಹೆಚ್ಚಾಗಿ ಬಳಸುತ್ತಾರೆ.

ಹೊಸ ಬಟ್ಟೆ ಸಡಗರ  : 
ವರಮಹಾಲಕ್ಷ್ಮಿ ಹಬ್ಬವೆಂದರೇನೆ ಸಂಭ್ರಮ, ಅದರಲ್ಲೂ ದೇವಿಯನ್ನು ಸಿಂಗರಿಸಲು ಹಬ್ಬದ ಹಿಂದಿನ ದಿನದಿಂದಲೇ ಬ್ಯುಜಿಯಾಗಿರುತ್ತಾರೆ, ಲಕ್ಷ್ಮೀಮುಖವಾಡ, ಕುಂಕುಮ, ಗಂಧದ ಜೊತೆಗೆ ಹೊಸ ಸೀರೆ, ಬ್ಲೌಸ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ, ಲಕ್ಷ್ಮೀಗೆ ಉಡಿಸುವ ಸೀರೆಯ ಬಣ್ಣ ಹೆಚ್ಚಾಗಿ ಕೆಂಪು ಮತ್ತು ಹಸಿರು ಬಣ್ಣದಾಗಿರುತ್ತದೆ.

ಕಲಶದಲ್ಲಿ ಅಕ್ಕಿ, ನೀರು, ಅರಿಶಿನ ಪುಡಿ, ನಾಣ್ಯ, ಅಡಿಕೆ ಮತ್ತು ಬಿಲ್ವ ಪತ್ರೆಯನ್ನು ಹಾಕಲಾಗುವುದು. ತೆಂಗಿನ ಕಾಯಿ ಪೂಜೆಗೆ ಬಳಸುವ ಪವಿತ್ರ ಹಾಗೂ ಅಗತ್ಯ ವಸ್ತು ತೆಂಗಿನಕಾಯಿ. ಮಂಗಳಕರ ವಸ್ತುವಾದ ಇದನ್ನು ಕಲಶವಿಡಲು ಬಳಸುತ್ತಾರೆ. ಈ ದಿನ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ-ಕುಂಕುಮದ ಜತೆಗೆ ಬಾಗಿನ ಕೊಡಲಾಗುತ್ತದೆ. ನಂತರ ಷೋಡಶೋಪಚಾರದಿಂದ ಮಾಡುವ ಪೂಜಾ ವಿಧಿ ನೆರವೇರಿಸಬೇಕು. ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜತೆಗೆ 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು. ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ-ಕುಂಕುಮ ಕೊಡಬೇಕು.

ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡುಗೆಯಲ್ಲಿ ಉಪಯೋಗಿಸಿ ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಬಹುದು. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು. ಹಬ್ಬಗಳಿಗೆ ಅತಿ ಅಗತ್ಯವಾಗಿ ಬೇಕಾಗಿರುವ ಹತ್ತಿಯ ಹಾರಗಳು, ಬತ್ತಿಗಳು, ಗೆಜ್ಜೆ ವಸ್ತ್ರ ಮುಂತಾದ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು. ಮಾರುಕಟ್ಟೆಯಿಂದ ಮುಂಚಿತವಾಗಿ ತಂದಿಟ್ಟುಕೊಳ್ಳಬಹುದು ಅಥವಾ ಮನೆಯಲ್ಲಿ ಮೊದಲೇ ಮಾಡಿಡಬಹುದು.

ಹಬ್ಬದ ಮೊದಲೇ ಪೂಜಾ ಸಾಮಗ್ರಿಗಳನ್ನು ತೊಳೆದು ಒರೆಸಿ ಇಡಿ. ಹಬ್ಬದ ಹಿಂದಿನ ದಿನ ಮತ್ತೊಮ್ಮೆ ಶುಚಿಗೊಳಿಸಿದರೆ ಅನುಕೂಲವಾಗುತ್ತದೆ. ಪೂಜಾವಿಧಾನದಲ್ಲಿ ಮಾತ್ರವಲ್ಲದೆ ವರಮಹಾಲಕ್ಷ್ಮಿ ಹಬ್ಬದಂದು ಮಾಡುವ ಅಡುಗೆ ವಿಚಾರದಲ್ಲೂ ಗೃಹಿಣಿಯರು ಅಷ್ಟೇ ಕಾಳಜಿ ವಹಿಸುತ್ತಾರೆ.
ವಿಶೇಷ ತಿಂಡಿ, ಭಕ್ಷ್ಯ, ನೈವೇದ್ಯಗಳನ್ನು ಹಬ್ಬದ ಹಿಂದಿನ ದಿನವೇ ಮಾಡಿಟ್ಟರೆ, ಇದರಿಂದ ಹಬ್ಬದ ದಿನ ಯಾವುದೇ ಚಿಂತೆಯಿಲ್ಲದೆ ವರಮಹಾಲಕ್ಷ್ಮಿಯನ್ನು ಶ್ರದ್ಧಾ ಭಗಕ್ತಿಯಿಂದ ಪೂಜಿಸಬಹುದು.

ಖರ್ಚು ಮಿತವಾಗಿರಲಿ :  ಹಬ್ಬಗಳೆಂದರೆ ಸಂಭ್ರಮದ ಜೊತೆಗೆ ಖಚಿನ ದಾರಿಯೂ ಹೌದು. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಲ್ಲಿ ಮುತ್ತೈದೆಯರಿಗೆ, ಮಕ್ಕಳಿಗೆ ಉಡುಗೊರೆ ನೀಡುವುದು ವಾಡಿಕೆ. ಅವುಗಳನ್ನು ಖರೀದಿಸಲು ಅಂಗಡಿಗೆ ಹೋಗುವ ಮುನ್ನ ಎಷ್ಟು ಅವಶ್ಯಕತೆ ಎಂಬುದನ್ನು ಮೊದಲೇ ಪಟ್ಟಿ ಮಾಡಿಕೊಂಡು ಕೊಂಡುಕೊಂಡರೆ ಹಬ್ಬ ಎಂದಿಗೂ ಹೊರೆಯಾಗುವುದಿಲ್ಲ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin