ವಸತಿ ಶಾಲೆಗಳಿಗೆ 3000 ಬೋಧಕ ಸಿಬ್ಬಂದಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Job-Updates

ಬೆಂಗಳೂರು, ಆ.11- ರಾಜ್ಯದಲ್ಲಿ 145 ವಸತಿ ಶಾಲೆಗಳನ್ನು ಪ್ರಾರಂಭಿಸಲು ಹಾಗೂ ಮೂರು ಸಾವಿರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇಂದಿಲ್ಲಿ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಬಳಿಗೊಂದು ವಸತಿ ಶಾಲೆ ಪ್ರಾರಂಭಿಸಲು ಸರ್ಕಾರ ಬದ್ಧವಾಗಿದೆ. ಈಗ 505 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 1.25 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇನ್ನುಳಿದ ಹೋಬಳಿಗಳಿಗೆ ಇನ್ನೊಂದು ತಿಂಗಳಲ್ಲಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗುವುದು ಎಂದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕೆಪಿಎಸ್‍ಸಿ ಮೂಲಕ  ಭರ್ತಿ ಮಾಡಲಾಗುವುದು. ಮೂಲಭೂತ ಸೌಲಭ್ಯಗಳೊಂದಿಗೆ ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಈ ವಸತಿ ಶಾಲೆಗಳು ಪ್ರಾರಂಭವಾಗಲಿವೆ ಎಂದರು.

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೇ.75, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಪ್ರವೇಶ ನೀಡಲಿದ್ದು, ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಪ್ರಾರಂಭಿಸಲು ಮಂಜೂರಾತಿ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು. ಮುಂದಿನ ವರ್ಷ 50 ವಿದ್ಯಾರ್ಥಿಗಳಿಂದ ವಸತಿ ಶಾಲೆ ಪ್ರಾರಂಭವಾಗಲಿದ್ದು, ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಉತ್ತಮ ಗುಣಮಟ್ಟದ ಸೌಲಭ್ಯ ನೀಡಲಾಗುವುದು ಎಂದು ಸಚಿವರು ತಿಳಿಸಿದರು.  ಪ್ರತಿ ವಸತಿ ಶಾಲೆಗೆ 12 ರಿಂದ 15 ಕೋಟಿ ರೂ. ವೆಚ್ಚವಾಗಲಿದೆ. ಈ ಕಟ್ಟಡ ನಿರ್ಮಾಣಕ್ಕಾಗಿ ಎರಡು ಸಾವಿರ ಕೋಟಿ ರೂ. ಹಣ ಒದಗಿಸಲಾಗಿದೆ. ಮಂಜೂರಾದ ವಸತಿ ಶಾಲೆಗಳಿಗೆ ಎರಡು ತಿಂಗಳಲ್ಲಿ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ನಿವೇಶನ ಒದಗಿಸಬೇಕು ಎಂದು ತಿಳಿಸಿದರು.   ಇಲ್ಲವಾದಲ್ಲಿ ಬೇರೆ ಕಡೆ ಸ್ಥಳಾಂತರ ಮಾಡಲಾಗುವುದು. ಸರ್ಕಾರಿ ಜಮೀನು ಸಿಗದ ಪಕ್ಷದಲ್ಲಿ ಖಾಸಗಿ ಜಮೀನನ್ನು ಖರೀದಿಸುತ್ತೇವೆ. ಪ್ರತಿ ವಸತಿ ಶಾಲೆಗೆ 10 ಎಕರೆ ಜಮೀನು ಅವಶ್ಯಕತೆ ಇದೆ ಎಂದು ಆಂಜನೇಯ ತಿಳಿಸಿದರು.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin