ವಸತಿ ಸಚಿವ ಎಂ. ಕೃಷ್ಣಪ್ಪಗೆ ಬಂಟರ ಸಂಘದಿಂದ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

Krishnappa

ಬೆಂಗಳೂರು,ನ.4-ರಾಷ್ಟ್ರದ ಮುಂದಿನ ಭವಿಷ್ಯ ರೂಪಿಸುವವರು ರಾಷ್ಟ್ರಕಾರಣಿಗಳೇ ಹೊರತು ರಾಜಕಾರಣಿಗಳಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.  ಸಮಾನ ಮನಸ್ಕ ಒಕ್ಕಲಿಗರ ವೇದಿಕೆ ಮತ್ತು ಬಂಟರ ಸಂಘದ ವತಿಯಿಂದ ವಸತಿ ಸಚಿವ ಎಂ.ಕೃಷ್ಣಪ್ಪ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳುವವರು ರಾಜಕಾರಣಿಗಳು. ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವವರು ರಾಷ್ಟ್ರಕಾರಣಿಗಳು. ಮಾತೃ ಹೃದಯ ಕೃಷ್ಣಪ್ಪ ಅವರು ರಾಷ್ಟ್ರಕಾರಣಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಧನೆ ಮಾಡಿದವರ ಶೋಷಣೆ ಮಾಡುವುದನ್ನು ನಿಲ್ಲಿಸಿದರೆ ಮುಂದಿನ 20 ವರ್ಷಗಳಲ್ಲಿ ಭಾರತ ಚೀನಾವನ್ನು ಮೀರಿಸಲಿದೆ. ಸಾಕಷ್ಟು ಪ್ರಗತಿಯನ್ನು ಸಾಧಿಸಬಹುದು ಎಂದು ಹೇಳಿದರು.
ಕೇವಲ ಗಣಕೀಕರಣ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದ ಅವರು, ಬಡವರ ನೋವು ನಿವಾರಿಸುವಂತೆ ಕಾನೂನು ತಿದ್ದುಪಡಿಗಳಾಗಬೇಕು, ಜೊತೆಗೆ ಸರಳೀಕರಣವಾಗಬೇಕು ಎಂಬ ಸಲಹೆಯನ್ನು ನೀಡಿದರು.  ಒಂದು ಕಡತ ಅನುಮೋದನೆಯಾಗಲು ಏಳೆಂಟು ಕಡೆ ಅಲೆದಾಡುವುದರಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಕೃಷ್ಣಪ್ಪನವರು ಕಳೆದ ಎಂಟು ವರ್ಷಗಳಿಂದ ಹಾಗೂ ಶಾಸಕ ಪ್ರಿಯಕೃಷ್ಣ ಅವರು ಕಳೆದ 5 ವರ್ಷಗಳಿಂದ ತಮ್ಮ ವೇತನವನ್ನು ಜಯದೇವ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ನೀಡಿ ಬಡವರ ಚಿಕಿತ್ಸೆಗೆ ನೆರವಾಗಿದ್ದಾರೆ.

ಬಹಳಷ್ಟು ರಾಜಕಾರಣಿಗಳು ರಿಯಾಯ್ತಿ ದರದ ಚಿಕಿತ್ಸೆ ನೀಡಿ ಎಂದು ಪತ್ರ ಬರೆಯುತ್ತಾರೆ. ಆದರೆ ಕೃಷ್ಣಪ್ಪನವರು ಪತ್ರದ ಜೊತೆ ಹಣವನ್ನೂ ಕಳುಹಿಸುತ್ತಾರೆ ಎಂದು ಹೇಳಿದರು.
ಅಜಾತಶತ್ರುವಾಗಿರುವ ಕೃಷ್ಣಪ್ಪ ಸರಳ ಸಜ್ಜಿನಿಕೆಯಿಂದ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಎಂದು ಪ್ರಶಂಸಿಸಿದರು.  ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಅದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಶ್ರೀ ಶಾಂತಿನಾಥ ಸ್ವಾಮೀಜಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಪ್ರೊ.ಕೃಷ್ಣೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಕೃಷ್ಣಪ್ಪ ಅವರನ್ನು ಅಭಿನಂದಿಸಿದರು.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin