ವೈದ್ಯಕೀಯ ಪ್ರವೇಶ ಹಗರಣ : ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ವಜಾಕ್ಕೆ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

Shukla--01

ನವದೆಹಲಿ, ಜ.30- ವೈದ್ಯಕೀಯ ಪ್ರವೇಶ ಹಗರಣದ ಆರೋಪಕ್ಕೆ ಸಿಲುಕಿರುವ ಅಲಹಾಬಾದ್ ಹೈಕೋರ್ಟ್‍ನ ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ಅವರನ್ನು ತಕ್ಷಣವೇ ಜಾರಿಯಾಗುವಂತೆ ವಜಾ ಮಾಡಬೇಕೆಂದು ಮೂವರು ನ್ಯಾಯಾಧೀಶರ ಸಮಿತಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳಿಗೆ ಶಿಫಾರಸು ಮಾಡಿದೆ. ಒಂದು ವೇಳೆ ನ್ಯಾಯಮೂರ್ತಿಗಳ ಶಿಫಾರಸಿನಂತೆ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕ್ರಮ ಕೈಗೊಂಡರೆ ಹಗರಣದಲ್ಲಿ ಸಿಲುಕಿ ವಜಾಗೊಂಡ ಮೊಟ್ಟ ಮೊದಲ ನ್ಯಾಯಮೂರ್ತಿಯೆಂಬ ಅಪ ಕೀರ್ತಿಗೆ ಎಸ್.ಎನ್.ಶುಕ್ಲಾ ಒಳಗಾಗಲಿದ್ದಾರೆ.

ಎಸ್.ಎನ್.ಶುಕ್ಲಾ ಮೇಲೆ ಕೇಳಿ ಬಂದಿರುವ ಆರೋಪಗಳು ಸತ್ಯಾಂಶದಿಂದ ಕೂಡಿವೆ. ಇದೊಂದು ಗಂಭೀರವಾದ ಪ್ರಕರಣವಾಗಿದ್ದು ನ್ಯಾಯಮೂರ್ತಿ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಮೂವರು ಸದಸ್ಯರ ಸಮಿತಿ ವರದಿ ನೀಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ನೀಡಿರುವ ವರದಿಯಲ್ಲಿ ಎಸ್.ಎನ್.ಶುಕ್ಲಾ ಮೇಲೆ ಕೇಳಿ ಬಂದಿರುವ ಆರೋಪಗಳನ್ನು ಉಲ್ಲೇಖಿಸಲಾಗಿದೆ. ವೈದ್ಯಕೀಯ ಪ್ರವೇಶಾತಿ ಹಗರಣದಲ್ಲಿ ಸಾಕಷ್ಟು ಲೋಪ ದೋಷ ಉಂಟಾಗಿರುವುದು ಕಂಡು ಬಂದಿದೆ ಎಂದು ತಿಳಿಸಲಾಗಿದೆ.

ಇದರಲ್ಲಿ ಅಲಹಾಬಾದ್ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಯಾಗಿರುವ ಶುಕ್ಲಾ ಶಾಮೀಲಾಗಿರುವುದರಿಂದ ಅವರನ್ನು ಹುದ್ದೆಯಲ್ಲಿ ಮುಂದುವರೆಸಬಾರದು. ತಕ್ಷಣವೇ ಕಿತ್ತು ಹಾಕಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕು. ಇಲ್ಲವೇ ಸಂಸತ್ತಿನಲ್ಲಿ ಮಹಾಭಿಯೋಗಕ್ಕೆ ಒಳಪಡಿಸುವಂತೆ ಸಲಹೆ ಮಾಡಲಾಗಿದೆ.
ಶುಕ್ಲಾ ಮೇಲೆ ಕೇಳಿ ಬಂದಿದ್ದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳು ಮೂವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು.

ಮದ್ರಾಸ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಸಿಕ್ಕಿಂ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಅಗ್ನಿಹೋತ್ರಿ ಹಾಗೂ ಮಧ್ಯಪ್ರದೇಶ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಪಿ.ಕೆ.ಜೈಸ್ವಾಲ್ ಅವರುಗಳು ಈ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯಕೀಯ ಪ್ರವೇಶಾತಿಯಲ್ಲಿ ಈಗ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ.ಶುಕ್ಲಾ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.  ನ್ಯಾಯಮೂರ್ತಿಗಳ ವಿರುದ್ಧವೇ ದೂರು ಕೇಳಿ ಬಂದಿದ್ದರಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಶುಕ್ಲಾ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಇದೀಗ ಶುಕ್ಲಾ ವಿರುದ್ಧವೇ ವರದಿ ನೀಡಿರುವುದರಿಂದ ಅವರ ಭವಿಷ್ಯದ ಮೇಲೆ ಕರಿ ನೆರಳು ಆವರಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin