ಶಬರಿಮಲೈನಲ್ಲಿ ಇಂದು ಮಕರ ಜ್ಯೋತಿ, ಭಾರೀ ಬಂದೋಬಸ್ತ್

ಈ ಸುದ್ದಿಯನ್ನು ಶೇರ್ ಮಾಡಿ

Makara-jyothi--002
ಇಡುಕ್ಕಿ, ಜ.14-ಕೇರಳದ ವಿಶ್ವವಿಖ್ಯಾತ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಕ್ರಾಂತಿ ಪ್ರಯುಕ್ತ ಮಕರವಿಳಕ್ಕು (ಮಕರ ಜ್ಯೋತಿ) ಉತ್ಸವ ನಡೆಯಲಿದೆ. ಈ ವಾರ್ಷಿಕ ಮಹಾ ಉತ್ಸವವನ್ನು ಸಾಕ್ಷೀಕರಿಸಲು ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈಗಾಗಲೇ ಅಯ್ಯಪ್ಪನ ಸನ್ನಿಧಾನಕ್ಕೆ ಧಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಸಂಕ್ರಾಂತಿ ಪ್ರಯುಕ್ತ ಇಂದು ಮುಂಜಾನೆಯಿಂದಲೇ ಶಬರಿಮಲೈನಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಅಯ್ಯಪ್ಪಸ್ವಾಮಿಯ ಲಕ್ಷಾಂತರ ಭಕ್ತರು ಶಬರಿಮಲೈನಲ್ಲಿರುವುದರಿಂದ ವಾರ್ಷಿಕ ಕಾರ್ಯಕ್ರಮವು ಸುಗಮವಾಗಿ ನಡೆಯಲು ಕೇರಳ ಸರ್ಕಾರ ಮತ್ತು ದೇವಸ್ಥಾನದ ಆಡಳಿತಮಂಡಳಿ ಸಕಲ ಕ್ರಮಗಳನ್ನು ಕೈಗೊಂಡಿದೆ. ಸ್ವಾಮಿಯ ದರ್ಶನ ಮತ್ತು ಮಕರವಿಳಕ್ಕು ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರ್ನಾಕುಲಂ ವಲಯ ಪೊಲೀಸ್ ಮಹಾ ನಿರ್ದೇಶಕರು, ಇಡುಕ್ಕಿ ವಿಭಾಗದ ಎಸ್‍ಪಿ ಮತ್ತು ಡಿವೈಎಸ್ಪಿಗಳು ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ಧಾರೆ.

ಪ್ರತಿ ವರ್ಷ ಮಕರ ಸಂಕ್ರಮಣದ ದಿನ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಮಕರ ಜ್ಯೋತಿ ಕಾಣಿಸಿಕೊಳ್ಳುತ್ತದೆ. ಅಪಾರ ಸಂಖ್ಯೆ ಭಕ್ತ ಮಹಾಶಯರು ಈ ಮಹಾ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಶ್ರದ್ಧಾಭಕ್ತಿ ಮತ್ತು ನೇಮನಿಷ್ಠೆಗಳಿಂದ ವತ್ರ ಆಚರಿಸಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ರಾತ್ರಿ ದೇದಿಪ್ಯಮಾನವಾಗಿ ಬೆಳಗುವ ಮಕರಜ್ಯೋತಿಯ ದರ್ಶನ ಭಾಗ್ಯ ಪಡೆದು ಅಯ್ಯಪ್ಪ ಭಕ್ತರು ಪುನೀತರಾಗುತ್ತಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin