ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಸಂದೀಪ್‍ಕುಮಾರ್ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

hassan
ಹಾಸನ,ಫೆ.1-ಮುಗಿಲು ಮುಟ್ಟಿದ ಆಕ್ರಂದನ, ಕುಟುಂಬದವರ ರೋದನ, ಸಾರ್ವಜನಿಕರಲ್ಲಿ ಮಡುಗಟ್ಟಿದ ಶೋಕ, ಗ್ರಾಮಸ್ಥರ ನೋವಿನೊಂದಿಗೆ, ಹಿಮಪಾತದಲ್ಲಿ ಸಿಲುಕಿ ಹುತಾತ್ಮನಾದ ಯೋಧ ಸಂದೀಪ್‍ಕುಮಾರ್ ಅವರ ಅಂತ್ಯಕ್ರಿಯೆಯನ್ನು ಸ್ವಗ್ರಾಮ ದೇವಿಹಳ್ಳಿಯಲ್ಲಿ ಸಕಲ ಸರ್ಕಾರಿ, ಸೇನಾ ಗೌರವಗಳೊಂದಿಗೆ ನೆರವೇರಿಸಲಾಯಿತು.   ಜಮ್ಮುಕಾಶ್ಮೀರದ ಗುರೇಜ್‍ನಲ್ಲಿ ಹಿಮಪಾತದಲ್ಲಿ ಹುತಾತ್ಮನಾದ ಯೋಧನ ಮೃತ ದೇಹವನ್ನು ಸತತ ಹಿಮಪಾತದ ಹಿನ್ನೆಲೆಯಲ್ಲಿ ಕಳೆದ ಆರು ದಿನಗಳಿಂದ ಹೊರತೆಗೆಯಲಾಗಿರಲಿಲ್ಲ. ನಿನ್ನೆ ಕಾರ್ಯಾಚರಣೆ ಯಶಸ್ವಿಯಾಗಿ ಮೃತ ದೇಹವನ್ನು ಹೊರ ತೆಗೆದು ಸಂಜೆ ದೆಹಲಿಯಿಂದ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಸೇನೆಯ ವಿಶೇಷ ವಿಮಾನದ ಮೂಲಕ ತರಲಾಯಿತು.

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಅಧಿಕಾರಿಗಳು ಆಗಮಿಸಿ ಹುತಾತ್ಮರಿಗೆ ನಮನ ಸಲ್ಲಿಸಿ ನಂತರ ಹಾಸನಕ್ಕೆ ಕಳುಹಿಸಿ ಕೊಡಲಾಯಿತು.  ನಂತರ ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಧ್ಯರಾತ್ರಿ 2.30ರ ಸುಮಾರಿಗೆ ಸಂದೀಪ್‍ಕುಮಾರ್ ಅವರ ಪಾರ್ಥೀವ ಶರೀರ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.   ಕಳೆಬರ ನೋಡುತ್ತಿದ್ದಂತೆ ಕುಟುಂಬದವರು, ಬಂದುಬಳಗ, ಸ್ನೇಹಿತರ ರೋದನ ಮುಗಿಲು ಮುಟ್ಟಿತು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೆಳಗ್ಗೆ 10 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ಸಂದರ್ಭದಲ್ಲಿ ಸಾವಿರಾರು ಜನ ಸಾರ್ವಜನಿಕರು, ವಿದ್ಯಾರ್ಥಿಗಳು, ಗಣ್ಯರು ಆಗಮಿಸಿ ಹುತಾತ್ಮ ಸಂದೀಪ್‍ಗೆ ಸೆಲ್ಯೂಟ್ ಸಲ್ಲಿಸಿದರು.  ನಂತರ ಸ್ವಗ್ರಾಮದ ದೇವಿಹಳ್ಳಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಂದೀಪ್ ಮೃತ ದೇಹವನ್ನು ಕೊಂಡೊಯ್ದು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತಿಮ ದರ್ಶನಕ್ಕಾಗಿ ದೇವಿಹಳ್ಳಿಯಲ್ಲೂ ಜನರು ಸಾಗರೋಪಾದಿಯಲ್ಲಿ ನೆರೆದಿದ್ದು, ಅಂತಿಮ ನಮನ ಸಲ್ಲಿಸಿದರು.

ಬಳಿಕ ಸಂದೀಪ್‍ಕುಮರ್ ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.  ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ , ಎಂ.ಪಿ.ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಸಂದೀಪ್‍ರ ದರ್ಶನ ಪಡೆದರು.   25 ಲಕ್ಷ ರೂ. ಪರಿಹಾರ: ಹುತಾತ್ಮ ಸಂದೀಪ್‍ಕುಮಾರ್ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಚೆಕ್‍ನ್ನು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.   ಜಮ್ಮುಕಾಶ್ಮೀರದಲ್ಲಿ ಹಿಮಪಾತಕ್ಕೆ ಸಾವನ್ನಪ್ಪಿದ್ದ ಹಾಸನದ ಯೋಧ ಸಂದೀಪ್‍ಕುಮಾರ್ ಅವರ ಮೃತ ದೇಹವನ್ನು ತುರ್ತಾಗಿ ಸ್ವಗ್ರಾಮಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿನ್ನೆ ದೆಹಲಿಯಿಂದ ಸಂದೀಪ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯುವ ಸಂದರ್ಭದಲ್ಲೇ ಅಂತಿಮ ನಮನ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin