ಸಿಎಂ ಆಪ್ತನ ಮನೆ ಮೇಲೆ ಐಟಿ ರೇಡ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು, ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

INCOME-TAX
ಬೆಂಗಳೂರು, ಆ.23- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದ್ದಂತೆ ಮುಖ್ಯಮಂತ್ರಿಯವರ ಆಪ್ತ ಸಚಿವರು, ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಆಪ್ತರ ಮನೆ ಮೇಲಿನ ಐಟಿ ದಾಳಿ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಇದು ಬಿಜೆಪಿ ಕೃಪಾಪೋಷಿತ ಐಟಿ ದಾಳಿ ಎಂದು ಜೆಡಿಎಸ್ ಆರೋಪಿಸಿದೆ.

ಕುಮಾರಸ್ವಾಮಿ ಅವರ ಎಲ್ಲಾ ವ್ಯವಹಾರಗಳನ್ನು ಬಲ್ಲ ಅವರ ಲೆಕ್ಕಪರಿಶೋಧಕರಾದ ಸಿ.ಎ.ಸುನಿಲ್ ಅವರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಮಾತ್ರವಲ್ಲ ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

ಕುಮಾರಸ್ವಾಮಿ ಅವರ ಬುಡಕ್ಕೆ ಐಟಿ ಇಲಾಖೆ ಕೈ ಹಾಕಿದ್ದರಿಂದ ಅವರ ಆಪ್ತರಲ್ಲಿ ಆತಂಕ ಶುರುವಾಗಿದೆ. ಈ ಬಗ್ಗೆ ಕೆಲವು ಸಚಿವರು ನೇರವಾಗಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಐಟಿ ಅಧಿಕಾರಿಗಳು ಇದೀಗ ಜೆಡಿಎಸ್ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದರ ಹಿಂದೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವಿದೆ. ಕುಮಾರಸ್ವಾಮಿ ಅವರ ಕುಟುಂಬ ಹಲವು ವ್ಯವಹಾರ, ಉದ್ಯಮಗಳನ್ನು ನಡೆಸುತ್ತಿದೆ. ಅವರನ್ನು ಗುರಿಯಾಗಿಸಿಕೊಂಡರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ವಿರೋಧ ಪಕ್ಷ ಭಾವಿಸಿದೆ. ಇದಕ್ಕಾಗಿ ಈ ದಾಳಿ ನಡೆದಿದೆ ಎಂದು ಜೆಡಿಎಸ್ ಶಾಸಕರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಟುಂಬದ ಲೆಕ್ಕಪರಿಶೋಧಕ ಸುನೀಲ್ ಅವರ ಜೆ.ಪಿನಗರದ ಮನೆ, ಗುಟ್ಟಹಳ್ಳಿಯ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ಪರಿಶೀಲನೆಯ ವೇಳೆ ಅಕ್ರಮ ವ್ಯವಹಾರ ಕಂಡುಬಂದರೆ ಇದನ್ನೇ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಬಿಜೆಪಿ ಸಿದ್ಧತೆ ನಡೆಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin