ಸಿಎಂ ಕುಮಾರಸ್ವಾಮಿ ಸ್ವಾಂತ್ರ್ಯೋತ್ಸವ ಭಾಷಣದ ಸಂಪೂರ್ಣ ಸಾರಾಂಶ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

CM-I-Day--02

ಬೆಂಗಳೂರು, ಆ.15- ಬೆಂಗಳೂರಿನಂತೆ ಇಡೀ ರಾಜ್ಯ ಫ್ಲೆಕ್ಸ್ ಮುಕ್ತವಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ತಿಂಗಳಿಗೆ ಒಂದು ದಿನ ಹೋಬಳಿಗಳ ವಾಸ್ತವ್ಯ ಮಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು. ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 72ನೇ ಸ್ವಾಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬೆಂಗಳೂರು ಫ್ಲೆಕ್ಸ್ ಮುಕ್ತವಾಗಬೇಕೆಂಬುದು ಬೆಂಗಳೂರಿಗರ ಆಸೆ. ಅದರಂತೆ ಫ್ಲೆಕ್ಸ್ ಮುಕ್ತಗೊಳಿಸಲು ಬಿಬಿಎಂಪಿ ನಿರಂತರ ಶ್ರಮಿಸುತ್ತಿದೆ. ಬೆಂಗಳೂರಿನ ಸ್ವಚ್ಛತೆಗೆ ಎಲ್ಲರೂ ಗಮನ ವಹಿಸಬೇಕೆಂದು ಮನವಿ ಮಾಡಿದರು.  ಎಲ್ಲಾ ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಪ್ರತಿ ತಾಲ್ಲೂಕಿನಲ್ಲಿ ಸಮೀಕ್ಷಾ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ತಿಂಗಳಿಗೆ ಒಂದು ದಿನ ಹೋಬಳಿಯಲ್ಲಿ ವಾಸ್ತವ್ಯ ಮಾಡಬೇಕು. ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಸಭೆ ನಡೆಸಬೇಕೆಂದು ಸಿಎಂ ಸೂಚಿಸಿದರು.

ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಚಾಪು ಮೂಡಿಸುತ್ತಿರುವ ಬೆಂಗಳೂರಿಗೆ ವಿಶ್ವದರ್ಜೆ ಮೂಲ ಸೌಲಭ್ಯ ಕಲ್ಪಿಸುವ ದೊಡ್ಡ ಸವಾಲಿದೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮೆಟ್ರೋ 2ನೇ ಹಂತ, ಫೆರಿಫೆರಲ್ ರಿಂಗ್‍ರೋಡ್, ಉಪನಗರ ರೈಲು ಯೋಜನೆಗಳನ್ನು ಶೀಘ್ರವೇ ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆ, ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿಗೂ ದೂರದೃಷ್ಟಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

CM-I-Day--04

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ಪ್ರಧಾನಿ, ರಕ್ಷಣಾ ಸಚಿವರು ಹಾಗೂ ಕರ್ನಾಟಕದ ಸಂಸದರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ವಸತಿ ಕುಟುಂಬಗಳನ್ನು ಗುರುತಿಸಬೇಕು. ಶಾಲಾ-ಕಾಲೇಜುಗಳ ಕಟ್ಟಡ, ಹಾಗೂ ಶಿಕ್ಷಕರ ಕೊರತೆ ಮೇಲೆ ನಿಗಾ ವಹಿಸಬೇಕು. ಘನತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಬೇಕು. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಮಿಂಚಿನ ವೇಗದಲ್ಲಿ ಪರಿಹಾರ ನೀಡಬೇಕು. ಸರ್ಕಾರಿ ಭೂಮಿಗಳ ರಕ್ಷಣೆಗೆ ಮುಂದಾಗಬೇಕೆಂದು ಅಧಿಕಾರಿಗಳಿಗೆ ಕುಮಾರಸ್ವಾಮಿ ಸೂಚಿಸಿದರು.

CM-I-Day--05

ತಾಯಿ ಹೃದಯದಿಂದ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬ ನಾಗರಿಕರನ್ನು ಪ್ರಭು ಎಂದು ಭಾವಿಸಬೇಕು. ಹೊರ ರಾಜ್ಯ, ದೇಶದಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡಿಗಾಗಿ ಅಳಿಲು ಸೇವೆ ಮಾಡಲು ಮುಂದಾಗಬೇಕೆಂದು ಕರೆ ಕೊಟ್ಟರು. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರವನ್ನು ರಾಜ್ಯ ಬಯಸುತ್ತದೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಸಮಾಜಘಾತುಕ ಕೃತ್ಯಗಳನ್ನು ಎಂದಿಗೂ ಸಹಿಸುವುದಿಲ್ಲ. ರಾಜ್ಯದ ಜನರ ಭದ್ರತೆ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

CM-I-Day--07

# ಹೂಡಿಕೆಯ ನೆಚ್ಚಿನ ತಾಣ:
ರಾಜ್ಯ ಹೂಡಿಕೆಯ ನೆಚ್ಚಿನ ತಾಣವಾಗಿದ್ದು, ಕಲಬುರ್ಗಿಯಲ್ಲಿ ಸೋಲಾರ್ ಉಪಕರಣಗಳ ತಯಾರಿಕೆ, ಕೊಪ್ಪಳದಲ್ಲಿ ಆಟಿಕೆಗಳ ಉದ್ಯಮ, ಬಳ್ಳಾರಿಯಲ್ಲಿ ವಸ್ತ್ರ ಉದ್ಯಮ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉಪಕರಣ, ಚಿತ್ರದುರ್ಗದಲ್ಲಿ ಗೃಹ ಬಳಕೆ, ಎಲ್‍ಇಡಿ ಬಲ್ಬ್‍ಗಳ ಉದ್ಯಮ , ಮೈಸೂರಿನಲ್ಲಿ ಐಸಿಬಿ ಚಿಪ್ ತಯಾರಿಕೆ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿ ಭಾಗಗಳ ಘಟಕ, ತುಮಕೂರಿನಲ್ಲಿ ಕ್ರೀಡಾ ಸಾಮಗ್ರಿಗಳ ಉದ್ಯಮ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ ಪರಿಕಲ್ಪನೆಯಲ್ಲಿ ಸ್ಥಳೀಯವಾಗಿ ದೊರೆಯುವ ಕಚ್ಛಾವಸ್ತುಗಳಿಗೆ ಅನುಗುಣವಾಗಿ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಹೇಳಿದರು. ಪ್ರತಿಷ್ಠಿತ ಬೆಂಗಳೂರು ಟೆಕ್ ಸಮ್ಮಿತ್ ನ.29ರಿಂದ ಮೂರು ದಿನ ನಡೆಯಲಿದ್ದು, ಉದ್ಯಮಿದಾರರು ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ. ವಿವಿಧ ಜಿಲ್ಲೆಗಳಲ್ಲೂ ಕೈಗಾರಿಕೆ ಸ್ಥಾಪಿಸುವ ಸರ್ಕಾರದ ಆಶಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದರು.

 

# ಪ್ರತಿ ಮನೆಗೆ ವಿದ್ಯುತ್:
370 ಮೆಗಾವ್ಯಾಟ್ ಸಾಮಥ್ರ್ಯದ ಯಲಹಂಕ ಅನಿಲ ವಿದ್ಯುತ್ ಸ್ಥಾವರವು ಈ ವರ್ಷ ಚಾಲನೆಗೊಳ್ಳಲಿದ್ದು, 37 ಹೊಸ ಉಪಕೇಂದ್ರಗಳು ಹಾಗೂ 800 ಕಿ.ಮೀ. ಪ್ರಸರಣಾ ಮಾರ್ಗಗಳನ್ನು ರಚಿಸಲಾಗುವುದು. ಎಲ್ಲಾ ವರ್ಗದ ಗ್ರಾಹಕರಿಗೆ ದಿನವಿಡಿ ವಿದ್ಯುತ್ ಒದಗಿಸಲು ಅಗತ್ಯವಿರುವ ವಿತರಣಾ ಜಾಲದ ಬಲವರ್ಧನೆ ಮಾಡಲಾಗುವುದು. ಪ್ರತಿ ಮನೆಗೂ ಈ ವರ್ಷ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಿಕ್ಷಣ ಮಾರಾಟದ ವಸ್ತುವಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ಚಾಲನೆ ನೀಡಲಾಗಿದ್ದು, ಈ ಶಾಲೆಗಳ ಬಗ್ಗೆ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲಾಗುವುದು. ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ವಸತಿ ಕಾಲೇಜುಗಳನ್ನು ಆರಂಭಿಸಲು ಚಿಂತಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಕೌಶಲ್ಯ ಆಧಾರಿತ ವಿಶ್ವವಿದ್ಯಾಲಯ ತೆರೆಯುವ ತೀರ್ಮಾನ ಮಾಡಲಾಗಿದೆ ಎಂದರು. ತಾವು ವ್ಯಾಸಂಗ ಮಾಡಿದ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಧನ ಸಹಾಯ ಮಾಡುವ ಅನುಕೂಲಕ್ಕಾಗಿ ಪೋರ್ಟಲ್ ತೆರೆಯಲಾಗುವುದು ಎಂದು ಹೇಳಿದರು.

ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಡಾ.ಎಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ವಿಶಿಷ್ಟವಾದ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಸುಲಭವಾಗಿ ಸಾರ್ವಜನಿಕರು ಬಳಸಿಕೊಳ್ಳುವಂತೆ ಸುಧಾರಿಸಲಾಗುವುದು ಎಂದರು.

ನಮ್ಮದು ಅತ್ಯಂತ ಮಾನವೀಯ ಮುಖವುಳ್ಳ ಸರ್ಕಾರ. ವಿಕಲಚೇತನರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತಿತರರ ಶೋಷಿತ ವರ್ಗದವರಿಗೆ ಆಸರೆ ನೀಡಲು ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ವಾಯುಮಾಲಿನ್ಯ, ಶಬ್ಧ ಮಾಲಿನ್ಯಕ್ಕೆ ತುರ್ತು ಪರಿಹಾರದ ಅಗತ್ಯವಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಏಕೀಕೃತ ಭೂ ಸಾರಿಗೆ ಪ್ರಾಧಿಕಾರವನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ. ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ಬಸ್‍ಗಳು ಒಂದು ಹೊಸ ಹೆಜ್ಜೆಯಾಗಿದೆ ಎಂದು ಹೇಳಿದರು.

ಸಾಮಾಜಿಕ ಅರಣ್ಯ ಬೆಳವಣಿಗೆಗೆ ಒತ್ತು ನೀಡಲು ಹಸಿರು ಕರ್ನಾಟಕ ಯೋಜನೆಯಡಿ ಸರ್ಕಾರಿ ಭೂಮಿಯಲ್ಲಿ ಗಿಡ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕಾಲಮಿತಿಯೊಳಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ 451 ಸಣ್ಣ ಸಂಪರ್ಕ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದರು. ಕರ್ನಾಟಕದ ಅಭಿವೃದ್ಧಿಯ ರಥಕ್ಕೆ ಚಕ್ರವಾಗಿ ಅಭಿವೃದ್ಧಿಯ ಫಲವನ್ನು ಎಲ್ಲರೂ ಒಗ್ಗಟ್ಟಾಗಿ ಅನುಭವಿಸೋಣ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin