ಸಿದ್ದರಾಮಯ್ಯನವರೇ ನಿಮಗೆ ನೈತಿಕತೆ ಇದೆಯಾ…? ಯಡಿಯೂರಪ್ಪ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa---Siddaramaiah-

ಬೆಂಗಳೂರು,ಅ.27-ನಮ್ಮ ಸಚಿವರ ವಿರುದ್ಧ ಎಫ್‍ಐಆರ್ ದಾಖಲಾದ ಸಂಪುಟದಲ್ಲಿ ಯಾರು ಮುಂದುವರೆದಿದ್ದರು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಧಿಕಾರಾವಧಿಯಲ್ಲಿ ಕೆಲವು ಸಚಿವರ ವಿರುದ್ಧ ಆರೋಪಗಳು ಕೇಳಿ ಬಂದಾಗ ತಕ್ಷಣವೇ ರಾಜೀನಾಮೆ ಪಡೆಯಲಾಗಿತ್ತು. ಎಫ್‍ಐಆರ್ ಹಾಕಿದ ಮೇಲೂ ಸಂಪುಟದಲ್ಲಿ ಯಾರೊಬ್ಬರು ಮುಂದುವರೆಯಲಿಲ್ಲ ಎಂದು ಹೇಳಿದರು.

ನನ್ನ ವಿರುದ್ದ ಎಸಿಬಿ ಎಫ್‍ಐಆರ್ ಹಾಕಿತ್ತು. ಆ ವೇಳೆ ನಾನು ಯಾವುದೇ ಪ್ರಮುಖ ಸ್ಥಾನದಲ್ಲಿ ಇರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ. ಕೆ.ಜೆ.ಜಾರ್ಜ್ ಅವರಿಂದ ರಾಜೀನಾಮೆ ಪಡೆದರೆ ನಿಮ್ಮ ಕುರ್ಚಿಗೆ ಕಂಟಕ ಬರುತ್ತದೆಯೇ ಎಂದು ಪ್ರಶ್ನಿಸಿದರು.
ಸಿಬಿಐ ವಿರುದ್ಧ ಮನಬಂದಂತೆ ಮಾತನಾಡುವ ಮೊದಲು ನಿಮಗೆ ನೈತಿಕತೆ ಇದ್ದರೆ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖಾ ಪ್ರಕ್ರಿಯೆಗಳು ನಡೆದಿದೆ ಹೊರತು ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವಾಗಲಿ ಅಥವಾ ನಮ್ಮ ಪಕ್ಷವಾಗಲಿ ಸಿಬಿಐ ಸಂಸ್ಥೆಯನ್ನು ಎಲ್ಲಿಯೂ ದುರುಪಯೋಗಪಡಿಸಿಕೊಂಡಿಲ್ಲ. ಜಾರ್ಜ್ ಅವರಿಂದ ರಾಜೀನಾಮೆ ಪಡೆಯದೆ ಕುಂಟು ನೆಪ ಹೇಳಿ ಸಿಬಿಐ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಸಿಐಡಿ ದುರುಪಯೋಗಪಡಿಸಿಕೊಂಡಿದೆ ಎಂಬುದಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿರುವುದೇ ಸಾಕ್ಷಿ ಎಂದು ವಾಗ್ದಾಳಿ ಮಾಡಿದರು. ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದಾಗಲೇ ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದಕ್ಕೆ ಇದು ಕೈಗನ್ನಡಿಯಾಗಿತ್ತು.
ಸಾಕ್ಷಿಗಳನ್ನೆಲ್ಲ ನಾಶಪಡಿಸಿ ಜಾರ್ಜ್ ಅವರಿಗೆ ಸಿಐಡಿಯಿಂದ ಕ್ಲೀನ್‍ಚಿಟ್ ಕೊಡಿಸಲಾಗಿತ್ತು. ಇದೀಗ ಗಣಪತಿ ಕುಟುಂಬಕ್ಕೆ ಬೆದರಿಕೆ ಹಾಕಲಾಗುತ್ತದೆ ಎಂಬ ಆರೋಪಗಳು ಕೇಳಿಬಂದಿವೆ. ಎಲ್ಲಿಯವರೆಗೂ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು. ತಕ್ಷಣವೇ ಜಾರ್ಜ್ ರಾಜೀನಾಮೆ ನೀಡಲೇಬೇಕು. ಸಿಐಡಿ ಎಫ್‍ಐಆರ್ ಹಾಕಿದಾಗ ರಾಜೀನಾಮೆ ನೀಡಿದ ನೀವು ಈಗ ಸಿಬಿಐ ಎಫ್‍ಐಆರ್ ದಾಖಲಿಸಿದರೂ ಏಕೆ ರಾಜೀನಾಮೆ ಕೊಡುತ್ತಿಲ್ಲ ಎಂದು ಬಿಎಸ್‍ವೈ ಪ್ರಶ್ನಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ನಿಷ್ಪಕ್ಷಪಾತ ಹಾಗೂ ಮುಕ್ತ ತನಿಖೆ ನಡೆಯಬೇಕಾದರೆ ಮೊದಲು ಸಿದ್ದರಾಮಯ್ಯನವರು ಜಾರ್ಜ್ ಅವರಿಂದ ರಾಜೀನಾಮೆ ಪಡೆದು ನೈತಿಕತೆ ತೋರ್ಪಡಿಸಲಿ ಎಂದು ಸವಾಲು ಹಾಕಿದರು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿ ಮೊದಲ ಆರೋಪಿಯಾಗಿದ್ದರೂ ಇಡೀ ಸಂಪುಟವೇ ಅವರ ರಕ್ಷಣೆಗೆ ನಿಂತಿದೆ. ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಲಿ ಎಂದು ಆಗ್ರಹಿಸಿದರು.
ಸಚಿವ ರಮೇಶ್‍ಕುಮಾರ್ ಮಹಾನ್ ಮುತ್ಸದ್ದಿಗಳಂತೆ ಮಾತನಾಡುವುದನ್ನು ಇನ್ನು ಮುಂದೆ ನಿಲ್ಲಿಸಬೇಕು. ಅವರ ಬೌದ್ಧಿಕ ಮತ್ತಿಭ್ರಮಣೆ ನನಗೆ ಆಶ್ಚರ್ಯ ತಂದಿದೆ. ಸಿಬಿಐ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪೆನ್ ಡ್ರೈವ್ ಸೇರಿದಂತೆ ಕೆಲವು ಪ್ರಮುಖ ಸಾಕ್ಷಿಗಳನ್ನು ಯಾರು ನಾಶಪಡಿಸಿದ್ದು ಎಂಬುದನ್ನು ರಮೇಶ್‍ಕುಮಾರ್ ಮೊದಲು ಬಹಿರಂಗಪಡಿಸಬೇಕು. ನಂತರ ಕೇಂದ್ರದ ವಿರುದ್ಧ ಮಾತನಾಡಲಿ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ರಾಜೀನಾಮೆ ಪಡೆಯದೆ ಕುಂಟು ನೆಪ ಹೇಳುತ್ತಿರುವುದು ಸರಿಯಲ್ಲ ಎಂದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin