ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ 20 ನಕ್ಸಲರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Naxal--01

ರಾಯ್‍ಪುರ್, ಜೂ.29- ಜಂಟಿ ಭದ್ರತಾ ಪಡೆಗಳು ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ ನಿನ್ನೆಯಿಂದ ಕೈಗೊಂಡಿರುವ ಬಿರುಸಿನ ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ನಕ್ಸಲರು ಬಲಿಯಾಗಿ, ಅನೇಕರು ಗಾಯಗೊಂಡಿದ್ದಾರೆ. ಹತ ಮಾವೋವಾದಿಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಭರ್ಜರಿ ಬೇಟೆಯೊಂದಿಗೆ ಏ.24ರಂದು 22 ಸಿಆರ್‍ಪಿಎಫ್ ಯೋಧರ ನರಮೇದ ನಡೆಸಿದ್ದ ನಕ್ಸಲರ ವಿರುದ್ಧ ರಕ್ತಪಾತದ ಮೂಲಕವೇ ಸೇನಾಪಡೆಗಳು ಸೇಡು ತೀರಿಸಿಕೊಂಡಿವೆ. ನಕ್ಸಲರ ಪ್ರಾಬಲ್ಯವಿರುವ ಸುಕ್ಮಾ ಜಿಲ್ಲೆಯ ದಟ್ಟ ಅಡವಿಗಳಲ್ಲಿ ಕಳೆದ ಕೆಲವು ದಿನಗಳಿಂದ ಸಿಆರ್‍ಪಿಎಫ್, ಎಸ್‍ಟಿಎಫ್ ಮತ್ತು ಕೋಬ್ರಾ ಘಟಕಗಳ ಯೋಧರು ಮಾವೋವಾದಿಗಳನ್ನು ಬೇಟೆಯಾಡಲು ಹಗಲುರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಾಲಾಪತ್ಥರು ಮತ್ತು ಸುತ್ತಮತ್ತಲ ಪ್ರದೇಶಗಳಲ್ಲಿ ಯೋಧರು ನಿನ್ನೆ ತಡರಾತ್ರಿ ನಕ್ಸಲರಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾಗ, ಅಡಗುತಾಣಗಳಲ್ಲಿದ್ದ ಮಾವೋವಾದಿಗಳು   ಭದ್ರತಾಪಡೆಗಳ ಮೇಲೆ ಹಠಾತ್ ಗುಂಡಿನ ದಾಳಿ ನಡೆಸಿದರು. ತಕ್ಷಣ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದ ಯೋಧರಿಂದ ಪ್ರತಿ ದಾಳಿ ನಡೆದಾಗ ಕೆಲ ಗಂಟೆಗಳ ಕಾಲ ಅರಣ್ಯದಲ್ಲಿ ಭೀಕರ ಗುಂಡಿನ ಕಾಳಗ ನಡೆಯಿತು.

ಗುಂಡೇಟಿನಿಂದ ಇನ್ನೂ ಕೆಲವು ಮಾವೋವಾದಿಗಳು ಸತ್ತಿರುವ ಸಾಧ್ಯತೆ ಇದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಯೋಧರು ಮತ್ತು ಪೊಲೀಸರ ಬಿರುಸಿನ ದಾಳಿಗೆ ಹೆದರಿ ಅನೇಕ ನಕ್ಸಲರು ಪರಾರಿಯಾಗಿದ್ದಾರೆ. ಈ ಪ್ರದೇಶದಲ್ಲಿ ಅಡಗಿರುವ ನಕ್ಸಲರಿಗಾಗಿ ವ್ಯಾಪಕ ಶೋಧ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin