ಹೈದರಾಬಾದ್’ಗೆ ಹೋದ ಸ್ಪೀಡಲ್ಲೇ ವಾಪಸ್ ಬರಬೇಕಾಗಿದೆ ಕಾಂಗ್ರೆಸ್-ಜೆಡಿಎಸ್ ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

Hydarabad--01
ಬೆಂಗಳೂರು, ಮೇ 18- ನಾಳೆಯೇ ಬಹುಮತ ಸಾಬೀತುಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಭೀತಿಯಿಂದ ಹೈದರಾಬಾದ್‍ಗೆ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ದಿಢೀರ್ ಹಿಂದಿರುಗಬೇಕಾಗಿದೆ. ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ನಿನ್ನೆ ರಾತ್ರಿ ಬಸ್‍ನಲ್ಲಿ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ.

ಹೈದರಾಬಾದ್‍ನ ಬಂಜಾರ್ ಹಿಲ್ಸ್ ಪಾರ್ಕ್ ಆಯಾತ್ ಹೋಟೆಲ್‍ಗೆ ಉಭಯ ಪಕ್ಷಗಳ ಶಾಸಕರು ತೆರಳಿ ಅಲ್ಲಿಂದ ಪ್ರತ್ಯೇಕ ಹೋಟೆಲ್‍ಗಳಲ್ಲಿ ವಾಸ್ತವ್ಯ ಹೂಡಿದ್ದರು. ಹೈದರಾಬಾದ್‍ನ ತಾಜ್ ಹೋಟೆಲ್‍ನಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಹೈಟೆಕ್ ಸಿಟಿಯ ನವೊಲ್ಲಾಟೆಲ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಜೆಡಿಎಸ್ ಶಾಸಕರು ತಮ್ಮ ಲಗೇಜುಗಳೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಎಲ್ಲಾ ಶಾಸಕರನ್ನು ಹೈದಾರಾಬಾದ್‍ಗೆ ಸ್ಥಳಾಂತರ ಮಾಡಲಾಗಿತ್ತು.

ನಿನ್ನೆ ಈಗಲ್‍ಟನ್ ರೆಸಾರ್ಟ್‍ನಲ್ಲಿ ಸಭೆ ನಡೆಸಿದ ಉಭಯ ಪಕ್ಷಗಳ ನಾಯಕರು, ಶಾಸಕರನ್ನು ಬೇರೆಡೆಗೆ ಸ್ಥಳಾಂತರ ಮಾಡಲು ತೀರ್ಮಾನಿಸಿ ಅದರಂತೆ ಕೇರಳದ ಕೊಚ್ಚಿಗೆ ಕರೆದೊಯ್ಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಯಿತಾದರೂ ಶಾಸಕರು ತೆರಳಬೇಕಾಗಿದ್ದ ವಿಶೇಷ ವಿಮಾನಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಶಾಸಕರು ಕೊಚ್ಚಿ ಬದಲು ಹೈದರಾಬಾದ್‍ಗೆ ತೆರಳಿದ್ದರು.
ಇಂದು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಯಾವ ಸ್ಪೀಡ್‍ನಲ್ಲಿ ಶಾಸಕರು ಹೈದರಾಬಾದ್‍ಗೆ ಹೋಗಿದ್ದರೋ ಅದೇ ಸ್ಪೀಡ್‍ನಲ್ಲಿ ಈಗ ಹಿಂದಿರುಗಬೇಕಾಗಿದೆ.

ನಾಳೆ 4ಗಂಟೆಗೆ ಬಹುಮತ ಸಾಬೀತಿಗೆ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಎಲ್ಲರೂ ಬೆಂಗಳೂರಿಗೆ ಆಗಮಿಸಬೇಕಾಗಿದ್ದು, ನಾಳೆ ನಡೆಯುವ ಸಭೆಯಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಬೇಕು. ನಂತರ ನಡೆಯುವ ಬಹುಮತ ಸಾಬೀತುಪಡಿಸುವ ಕಲಾಪದಲ್ಲಿ ಪಾಲ್ಗೊಳ್ಳಬೇಕು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಎಲ್ಲ ಕಸರತ್ತನ್ನು ಮಾಡಿದೆ. ಹಲವು ಶಾಸಕರ ಸಂಪರ್ಕ ಸಾಧಿಸಿ ಬಹುಮತ ಸಾಬೀತು ಸಂದರ್ಭದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದೆ.

ಕಾಂಗ್ರೆಸ್‍ನ ಇಬ್ಬರು ಶಾಸಕರಾದ ಆನಂದ್‍ಸಿಂಗ್, ಪ್ರತಾಪ್‍ಗೌಡ ಅವರು ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಇನ್ನೂ ಸಿಕ್ಕಿಲ್ಲ. ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ರಾತ್ರೋರಾತ್ರಿ ಹೈದರಾಬಾದ್‍ಗೆ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಈಗ ಬೆಂಗಳೂರಿನತ್ತ ದೌಡಾಯಿಸಿದ್ದಾರೆ. ವಿಶ್ವಾಸ ಮತಯಾಚನೆಗೆ 14 ದಿನಗಳ ಅವಕಾಶ ನೀಡಲಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಮುಖಂಡರು ಪ್ರಾಯಾಸ ಪಡಬೇಕಾಗಿತ್ತು. ಆದರೀಗ ಚಿತ್ರಣ ಬದಲಾಗಿದೆ.

ಸುಪ್ರೀಂಕೋರ್ಟ್ ನಾಳೆಯೇ ವಿಶ್ವಾಸ ಮತಯಾಚನೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಗೊಂದಲ ಬಗೆ ಹರಿದಿದೆ. ವಿಶ್ವಾಸ ಮತ ಯಾಚನೆಯಲ್ಲಿ ಯಡಿಯೂರಪ್ಪ ಸಫಲರಾಗದಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin