ಹೊಸ ವರ್ಷದಲ್ಲೂ ಹೊಸ ನೋಟುಗಳು ಸಿಗೋದು ಡೌಟ್..!

ಈ ಸುದ್ದಿಯನ್ನು ಶೇರ್ ಮಾಡಿ

ATM-No-Cash

ಬೆಂಗಳೂರು, ಡಿ.26-ನೋಟು ನಿಷೇಧಗೊಂಡು 45 ದಿನ ಕಳೆದರೂ ಜನಸಾಮಾನ್ಯರಿಗೆ ರಗಳೆ ತಪ್ಪಿಲ್ಲ. ನೋಟಿಗಾಗಿ ಅಲೆದಾಡುತ್ತಿರುವವರ ಪರದಾಟ ತೀವ್ರಗೊಂಡಿದೆ. ಬ್ಯಾಂಕ್‍ಗಳಲ್ಲಿ ಹಣದ ವಹಿವಾಟು ನಿರೀಕ್ಷೆಯಂತೆ ನಡೆಯುತ್ತಿಲ್ಲ. ಜನರ ಕೈಗೆ ಹಣ ಸಿಗುತ್ತಿಲ್ಲ. ಬ್ಯಾಂಕ್ ಎಟಿಎಂಗಳ ಮುಂದೆ ಕ್ಯೂ ತಪ್ಪಿಲ್ಲ.  ತಾವು ಪ್ರಾಮಾಣಿಕವಾಗಿ ಗಳಿಸಿದ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ, ಆರ್‍ಬಿಐ ದಿನಕ್ಕೊಂದು ನಿಯಮಗಳನ್ನು ಜಾರಿಗೊಳಿಸುತ್ತಲೇ ಇವೆ. ಆ ನಿಯಮಗಳು ಬಡ, ಮಧ್ಯಮವರ್ಗದವರ ಮೇಲೆ ಗದಾಪ್ರಹಾರವಾಗುತ್ತಲೇ ಇವೆ.
ಬ್ಯಾಂಕ್‍ನಿಂದ ಹಣ ವಿತ್‍ಡ್ರಾ ಮಾಡುವ ಮಿತಿಯನ್ನು ಮುಂದುವರೆಸುವ ಮುನ್ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿರುವುದರಿಂದ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಮದುವೆ ಮತ್ತಿತರ ಸಮಾರಂಭಗಳನ್ನು ಮಾಡುವವರು ಈ ಎಲ್ಲವನ್ನು ಸದ್ಯಕ್ಕೆ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಕಾರಣ ಬ್ಯಾಂಕ್‍ನಿಂದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.

ವಾರಕ್ಕೆ 24 ಸಾವಿರ ಹಣವನ್ನು ವಿತ್‍ಡ್ರಾ ಮಾಡಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಬಹುತೇಕ ಬ್ಯಾಂಕ್‍ಗಳಲ್ಲಿ 10 ಸಾವಿರ ರೂ. ಮಾತ್ರ ಪಡೆಯಬಹುದು. ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ಕಾರಣ ಶೇ.80ರಷ್ಟು ಎಟಿಎಂಗಳು ಮುಚ್ಚಿವೆ. 20ರಷ್ಟು ಎಟಿಎಂಗಳಲ್ಲಿ ಕೇವಲ 2 ಸಾವಿರದಷ್ಟು ಹಣ ಮಾತ್ರ ದೊರೆಯುತ್ತಿದೆ. ಎಟಿಎಂಗಳಲ್ಲೂ ಹಣ ಪಡೆಯುವ ಮಿತಿಯನ್ನು ಏರಿಕೆ ಮಾಡಿಲ್ಲ. 45 ದಿನ ಕಳೆದರೂ ಯಾವುದೇ ಬದಲಾವಣೆಗಳು ಆಗಿಲ್ಲ. ನಿಯಮಗಳು ಮಾತ್ರ ಜಾರಿಯಾಗುತ್ತಲೇ ಇವೆ. ಜನಸಾಮಾನ್ಯರು ಹೈರಾಣಾಗುತ್ತಲೇ ಇದ್ದಾರೆ. ಕಾಳಧನಿಕರನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ತಾವು ಸ್ವಲ್ಪ ಸುಧಾರಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಜನರಲ್ಲಿ ಮನವಿ ಮಾಡಿದ್ದಾರೆ.
ಇದನ್ನು ಸಹಿಸಿಕೊಳ್ಳಲು ಜನರು ಸಿದ್ಧರಿದ್ದಾರೆ. ಆದರೆ ಅಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು ಆರ್‍ಬಿಐ ಅಧಿಕಾರಿಗಳೇ ಪಾಲುದಾರರಾಗಿರುವುದರಿಂದ ಜನಸಾಮಾನ್ಯರು ಆಕ್ರೋಶಗೊಳ್ಳತೊಡಗಿದ್ದಾರೆ.

ಬ್ಯಾಂಕ್‍ನವರೇ ಉಳ್ಳವರೊಂದಿಗೆ ಶಾಮೀಲಾಗಿ ಹಣ ಸಿಗದಂತೆ ಮಾಡಿದ್ದಾರೆ. ನಾವೇಕೆ ಸಹಿಸಿಕೊಳ್ಳಬೇಕು ಎಂದು ಹಲವೆಡೆ ಮಾತುಗಳು ಕೇಳಿ ಬಂದಿವೆ. ಇನ್ನು ವ್ಯಾಪಾರ ವಹಿವಾಟು ಎಲ್ಲಾ ಕಡೆ ಕುಸಿದಿದೆ. ಫುಟ್‍ಪಾತ್ ವ್ಯಾಪಾರದಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರಗಳು ಶೇ.40 ರಿಂದ 50ರಷ್ಟು ಸ್ಥಗಿತಗೊಂಡಿವೆ. ಹಣದ ವಹಿವಾಟು ನಿಂತಿರುವುದರಿಂದ ವ್ಯಾಪಾರಿಗಳ ವರ್ತಕರು, ದಿನಗೂಲಿನೌಕರರು, ಶ್ರಮಿಕರ ಪರಿಸ್ಥಿತಿ ಅಯೋಮಯವಾಗಿದೆ. ನವೆಂಬರ್ 9 ರಂದು ಯಾವ ಪರಿಸ್ಥಿತಿ ಇತ್ತೋ, ಅದೇ ಪರಿಸ್ಥಿತಿ ಈಗಲೂ ಕೂಡ ಇದೆ. ಕ್ಯಾಷ್‍ಲೆಸ್ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಎಲ್ಲರೂ ಕ್ರೆಡಿಟ್, ಡೆಬಿಟ್ ಕಾರ್ಡ್‍ಗಳನ್ನು ಬಳಸಬೇಕು ಎಂದು ಸರ್ಕಾರ ಹೇಳುತ್ತಿದೆ. ಜನ ಕಾರ್ಡ್ ಬಳಕೆಗೆ ಹೊಂದಿಕೊಳ್ಳಲು ಇನ್ನೆಷ್ಟು ದಿನ ಬೇಕಾಗುತ್ತದೆಯೋ? ಶೇ.50ಕ್ಕಿಂತ ಹೆಚ್ಚು ನಗದಿನಲ್ಲಿಯೇ ನಡೆಯುವ ವ್ಯವಹಾರ, ನಗದು ರಹಿತವಾಗಿ ನಡೆಸಲು ಸಾಕಷ್ಟು ಹೆಣಗಾಡಬೇಕಾಗಿದೆ. ಈ ನಡುವೆ ದೊಡ್ಡ ದೊಡ್ಡ ಕಪ್ಪು ಕುಳಗಳನ್ನು ಐಟಿ ಅಧಿಕಾರಿಗಳು ಬಲೆಗೆ ಕೆಡಹುತ್ತಿದ್ದಾರೆ. ಇದಲ್ಲದೆ, ಕಪ್ಪು ಹಣವನ್ನು ಪಿಂಕ್ ಮಾಡಿಕೊಂಡವರನ್ನು ಕೂಡ ಹಿಡಿದು ಜೈಲಿಗಟ್ಟುತ್ತಿದ್ದಾರೆ.

ಈ ಎಲ್ಲದರ ನಡುವೆ ದಿನದ ವಹಿವಾಟಿಗಾಗಿ ಪ್ರತಿದಿನದ ಬದುಕಿಗಾಗಿ ಹೋರಾಟ ಮಾಡುತ್ತಿರುವ ಪ್ರಾಮಾಣಿಕ ಜನಸಾಮಾನ್ಯರು ತನ್ನ ಹಣಕ್ಕಾಗಿ 45 ದಿನಗಳಿಂದ ಹೈರಾಣಾಗಿದ್ದಾರೆ. ಇವರ ಸಮಸ್ಯೆಗೆ ಎಂದು ಮುಕ್ತಿ ಸಿಗುತ್ತದೋ? ಉಳಿದ ಐದು ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.  45 ದಿನಗಳಲ್ಲಿ ದೊರೆಯದ ಪರಿಹಾರ ಇನ್ನೂ ಐದು ದಿನಗಳಲ್ಲಿ ಸಿಗುತ್ತದೆಯೇ? ಮೊದಮೊದಲು ಜನಸಾಮಾನ್ಯರು ಈ ಕ್ರಮವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದರು. ಆದರೆ ಇಷ್ಟು ದಿನವಾದರೂ ಸಮಸ್ಯೆಗೆ ಪರಿಹಾರ ದೊರೆಯದಿರುವುದರಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೇಗ ಈ ಸಮಸ್ಯೆಗೆ ಪರಿಹಾರ ದೊರೆಯಬೇಕು. ಎಂದಿನಂತೆ ತಮ್ಮ ಹಣ ತಮಗೆ ದೊರೆಯಬೇಕು ಎಂದು ಜನರ ಅಭಿಪ್ರಾಯವಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin